Homeರಾಜ್ಯ'ಆಶಾ' ಒತ್ತಡದಲ್ಲಿರುವ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ : ಅನಿರ್ದಿಷ್ಟಾವಧಿ ಪ್ರತಿಭಟನೆಗಿಳಿದ ಬಿಸಿಯೂಟ ಸಿಬ್ಬಂದಿ

‘ಆಶಾ’ ಒತ್ತಡದಲ್ಲಿರುವ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ : ಅನಿರ್ದಿಷ್ಟಾವಧಿ ಪ್ರತಿಭಟನೆಗಿಳಿದ ಬಿಸಿಯೂಟ ಸಿಬ್ಬಂದಿ

ಬೆಂಗಳೂರು, ನ.25- ಆಶಾ ಕಾರ್ಯಕರ್ತೆಯರು ಸತತ 9 ದಿನಗಳಿಂದಲೂ ಅಹೋರಾತ್ರಿ ಧರಣಿ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ನಡುವೆಯೇ, ಬಿಸಿಯೂಟ ಕಾರ್ಯಕರ್ತರು ಕೂಡ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ನಗರದಲ್ಲಿ ಆರಂಭವಾಗಿರುವ ಪ್ರತಿಭಟನೆಯಲ್ಲಿ ಸಾವಿರಾರು ಜನ ಬಿಸಿಯೂಟ ಕಾರ್ಯಕರ್ತೆಯರು ಭಾಗವಹಿಸಿದ್ದಾರೆ. ಒಟ್ಟು 1.20 ಲಕ್ಷ ದಾಸೋಹ ಸಿಬ್ಬಂದಿಯಲ್ಲಿ, ಕ್ಲಸ್ಟರ್‌ ಕಿಚನ್‌ ವ್ಯವಸ್ಥೆ ಜಾರಿಗೆ ಬಂದರೆ 60 ಸಾವಿರ ಜನ ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

25 ವರ್ಷಗಳಿಂದಲೂ ನಾವು ಕೆಲಸ ಮಾಡುತ್ತಿದ್ದೇವೆ. ಈಗ ಶಾಲಾ ಮುಖ್ಯೋಪದ್ಯಾಯ ಸಂಘದಿಂದ ಬಿಸಿಯೂಟ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಪತ್ರವನ್ನು ಸರ್ಕಾರಕ್ಕೆ ನೀಡಲಾಗಿದೆ. ಅದಕ್ಕಾಗಿ ಕ್ಲಸ್ಟರ್‌ ಕಿಚನ್‌ ವ್ಯವಸ್ಥೆ ಜಾರಿಗೊಳಿಸುವ ಪ್ರಯತ್ನಗಳಾಗುತ್ತಿವೆ. 25 ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದವರಿಗೆ ಈಗ ಅಸಾಧ್ಯವಾಗಿರುವುದು ಏಕೆ? ಎಂದು ಗೊತ್ತಿಲ್ಲ. ಏನೇ ಆದರೂ ನಮಗೆ ಅವಕಾಶ ಕೊಟ್ಟರೆ ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಬಿಸಿಯೂಟ ನೌಕರರ ಸಂಘದ ಉಪಾಧ್ಯಕ್ಷೆ ಹನುಮಕ್ಕ ಹೇಳಿದ್ದಾರೆ.

ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿರುವ ಕ್ಲಸ್ಟರ್‌ ಅಡುಗೆಮನೆ ವ್ಯವಸ್ಥೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಆಗ್ರಹಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್‌‍. ವರಲಕ್ಷಿ, ಅಧ್ಯಕ್ಷೆ ಲಕ್ಷೀದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದು, ಕ್ಲಸ್ಟರ್‌ ಕಿಚನ್‌ ವ್ಯವಸ್ಥೆ ಜಾರಿಗೆ ತರುವುದರಿಂದ ಈಗಾಗಲೇ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯ ಉದ್ಯೋಗಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಪಾತ್ರೆಗಳು, ಅನಿಲ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿವೆ. ಯೋಜನೆಯ ಮೇಲ್ವಿಚಾರಣೆಗಾಗಿ ಪ್ರತ್ಯೇಕ ನಿರ್ದೇಶನಾಲಯವನ್ನೂ ಸ್ಥಾಪಿಸಲಾಗಿದೆ. ಇಂತಹ ವ್ಯವಸ್ಥೆ ಇರುವಾಗ ಕ್ಲಸ್ಟರ್‌ ಅಡುಗೆಮನೆಗಳ ಅಗತ್ಯವೇನು ಎಂದು ಪ್ರಶ್ನಿಸಲಾಗಿದೆ.

ಬಿಸಿಯೂಟ ಯೋಜನೆಯಲ್ಲಿ ಯಾವುದೇ ರೀತಿಯ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಬಾರದು. ಈಗಾಗಲೇ ಇಸ್ಕಾನ್‌ ಹಾಗೂ ಅದಮ್ಯ ಚೇತನ ಮಠಗಳಿಗೆ ವಹಿಸಿರುವ ಬಿಸಿಯೂಟ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಬೇಕು. ಅಕ್ಷರ ದಾಸೋಹ ಯೋಜನೆಯ ಜಂಟಿ ಖಾತೆಯನ್ನು ಮುಖ್ಯ ಅಡುಗೆಯವರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ನಾಮನಿರ್ದೇಶಿತ ಮುಖ್ಯ ಶಿಕ್ಷಕರ ನಿರ್ವಹಣೆಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಶಿಕ್ಷಕರಿಗೆ ಅಡುಗೆ ಜವಾಬ್ದಾರಿ ವಹಿಸುವುದನ್ನೂ ಸಂಘ ವಿರೋಧಿಸಿದೆ. ಶಿಕ್ಷಕರು ಶಾಲಾ ಪಠ್ಯಕ್ರಮ ಮತ್ತು ಬೋಧನಾ ಚಟುವಟಿಕೆಗಳತ್ತ ಗಮನಹರಿಸಬೇಕಾಗಿದ್ದು, ಅಡುಗೆ ನಿರ್ವಹಣೆಯ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸುವುದು ಸೂಕ್ತವಲ್ಲ ಎಂದು ಹೇಳಿದೆ.

RELATED ARTICLES

Latest News