ಬೆಂಗಳೂರು, ನ.25- ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ನಲ್ಲಿ ಆಯೋಜಿಸಿರುವ ಹೂವಿನ ಹಬ್ಬ – 2026ಕ್ಕೆ ಇಂದು ಸಂಜೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಚಾಲನೆ ನೀಡಲಿದ್ದಾರೆ.
ಇಂದಿನಿಂದ ಡಿ. 7ರವರೆಗೆ ನಡೆಯಲಿರುವ ಈ ಪುಷ್ಪ ಪ್ರದರ್ಶನದಲ್ಲಿ ವಿವಿಧ ಜಾತಿಯ ಹೂವುಗಳು, ಅಲಂಕಾರಿಕ ಸಸ್ಯಗಳು ಹಾಗೂ ಆಕರ್ಷಕ ಪುಷ್ಪ ಕಲಾಕೃತಿಗಳು ಸಾರ್ವಜನಿಕರ ಕಣನ ನ ಸೆಳೆಯಲಿವೆ. ನಗರವಾಸಿಗಳು ಕುಟುಂಬ ಸಮೇತ ಭೇಟಿ ನೀಡಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಹೊಯ್ಸಳರ ವಾಸ್ತುಶಿಲ್ಪಕ್ಕೆ ಹೂವಿನ ಮೆರುಗು:ಈ ಬಾರಿಯ ಹೂವಿನ ಹಬ್ಬದಲ್ಲಿ ಹೊಯ್ಸಳರ ವಾಸ್ತುಶಿಲ್ಪ, ತಾಯಿ ಭುವನೇಶ್ವರಿ ಹಾಗೂ ಕರ್ನಾಟಕದ ನಕ್ಷೆ ಸೇರಿದಂತೆ ಹಲವು ವಿಶೇಷ ಕಲಾಕೃತಿಗಳನ್ನು ಹೂವುಗಳಿಂದ ರೂಪಿಸಿ ಪ್ರದರ್ಶಿಸಲಾಗುತ್ತಿದೆ. ವಿವಿಧ ಬಣ್ಣಗಳ ಹೂವುಗಳನ್ನು ಬಳಸಿ ಸಿದ್ಧಪಡಿಸಿರುವ ಕಲಾಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ.
ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿಣ್ಣರ ಕಲಾಕೃತಿಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.ಲಕ್ಷಾಂತರ ಹೂವುಗಳ ವೈವಿಧ್ಯಹೂವಿನ ಹಬ್ಬದಲ್ಲಿ ಲಿಸಿಯಾಂಥಸ್, ಪೆಟೂನಿಯಾ, ಕ್ರೈಸಾಂಥಿಮಮ್, ಸೆಲೋಸಿಯಾ, ಮಾರಿಗೋಲ್ಡ್, ಜೀನಿಯಾ, ಡಯಾಂಥಸ್, ಸಾಲ್ವಿಯಾ, ಸ್ನ್ಯಾಪ್ಡ್ರಾಗನ್ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬಗೆಯ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ. ಇಂಪೇಷಿಯನ್ಸ್, ಬಾಲ್ಸಮ್, ಟೊರೇನಿಯಾ, ಬಿಗೋನಿಯಾ, ಗಜಾನಿಯಾ ಮತ್ತು ಪೆಂಟಾಸ್ನಂತಹ ಹೂವಿನ ಗಿಡಗಳೂ ಇರಲಿವೆ.ಇದರ ಜತೆಗೆ ಫಿಲೋಡೆಂಡ್ರಾನ್, ಕೋಲಿಯಸ್, ಶೆಫ್ಲೆರಾ, ರಾಫಿಸ್ ಪಾಮ್ ಹಾಗೂ ಬ್ರೊಮೆಲಿಯಾಡ್ಸ್ ನಂತಹ ಅಲಂಕಾರಿಕ ಸಸ್ಯಗಳನ್ನೂ ಪ್ರದರ್ಶನದಲ್ಲಿ ಇರಿಸಲಾಗುತ್ತದೆ.
ಒಟ್ಟು 1.25 ಲಕ್ಷ ಅಲಂಕಾರಿಕ ಹೂಗಿಡಗಳ ಜೋಡಣೆಯ ಜತೆಗೆ ಪುಷ್ಪ ಕಲಾಕೃತಿಗಳಿಗಾಗಿ ಲಕ್ಷಾಂತರ ಹೂವುಗಳನ್ನು ಬಳಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಕಲೆ, ಸಂಸ್ಕೃತಿಗೂ ವೇದಿಕೆ:
ಹೂವಿನ ಹಬ್ಬವು ಕೇವಲ ಪುಷ್ಪ ಪ್ರದರ್ಶನಕ್ಕೆ ಸೀಮಿತವಾಗದೆ ಕಲೆ, ಸಂಸ್ಕೃತಿ ಮತ್ತು ಮನರಂಜನೆಯ ಸಮಾಗಮವಾಗಿಯೂ ಮೂಡಿಬರಲಿದೆ. ಸಂಗೀತ, ನೃತ್ಯ, ಸ್ಥಳೀಯ ಕಲಾ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ತೋಟಗಾರಿಕೆ, ಹೂವಿನ ಕೃಷಿ ಮತ್ತು ಅಲಂಕಾರಿಕ ಸಸ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಬೆಳೆಸುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.
ಪ್ರದರ್ಶನಕ್ಕೆ ಆಗಮಿಸುವವರಿಗೆ ವಿವಿಧ ಆಹಾರ ಮಳಿಗೆಗಳು ಹಾಗೂ ಇತರ ಆಕರ್ಷಣೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂಜೆ ವೇಳೆ ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವವರು ಹೂವುಗಳ ಸೌಂದರ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಸ್ವಾದಿಸಬಹುದಾಗಿದೆ.
ಪ್ರವೇಶ ಶುಲ್ಕ ಎಷ್ಟು..?
ಹೂವಿನ ಹಬ್ಬಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ ವಯಸ್ಕರಿಗೆ 50 ರೂ. ಹಾಗೂ ಮಕ್ಕಳಿಗೆ 20 ರೂ. ಶುಲ್ಕ ಇರಲಿದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.ಡಿಸೆಂಬರ್ 7ರವರೆಗೆ ನಡೆಯಲಿರುವ ಈ ಹೂವಿನ ಹಬ್ಬವು ಬೆಂಗಳೂರಿನ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ನಗರದ ಮಧ್ಯಭಾಗದಲ್ಲೇ ಹೂವುಗಳ ಲೋಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಿದೆ.
