ಬೆಂಗಳೂರು, ನ.25- ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಂ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಖಂಡಿತವಾಗಿಯೂ ನಡೆಯಲಿದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಪಕ್ಷ ನಮ ಕೈಬಿಡುವುದಿಲ್ಲ, ನಮಗೂ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ತಾವು ಯಾವುದೇ ಕಾಯುವ ಪಟ್ಟಿಯಲ್ಲಿ ಇಲ್ಲ. ಪಕ್ಷದ ಕಟ್ಟಾಳುವಾಗಿ ಪಕ್ಷ ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ. 2004ರಲ್ಲಿಯೂ ಕೊನೆಯ ಹಂತದಲ್ಲಿ ಪಕ್ಷದ ನಿರ್ಧಾರ ತಿಳಿಸಲಾಗಿತ್ತು. ಅಂದಿನಿಂದಲೂ ಪಕ್ಷದ ಸೂಚನೆಯಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.
ಬಿಜೆಪಿ ಆಡಳಿತಾವಧಿಯಲ್ಲಿ ಪ್ರಿಯಕೃಷ್ಣ ಮಾತ್ರ ಗೆಲುವು ಸಾಧಿಸಿದ್ದರು. ಯಡಿಯೂರಪ್ಪ ಅವರ ಅವಧಿಯಲ್ಲಿಯೂ ಒಬ್ಬರೇ ಗೆದ್ದಿದ್ದರು. ಪಕ್ಷ ಅವಕಾಶ ನೀಡಿದಾಗ ಪ್ರಿಯಕೃಷ್ಣ ಗೆದ್ದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಾವು ಹಾಗೂ ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ ಗೆಲುವು ಸಾಧಿಸಿದ್ದೇವೆ. ನಮ ಕ್ಷೇತ್ರಗಳಲ್ಲಿನ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.
ಈ ಹಿಂದೆ ಸಚಿವ ಸ್ಥಾನ ದೊರೆತಿದೆ. ಈಗ ಸಚಿವ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ಬದಲಿಸುವ ಪ್ರಶ್ನೆಯೇ ಇಲ್ಲ. ಸೋನಿಯಾ ಗಾಂಧಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ನಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಕೃಷ್ಣಪ್ಪ ಹೇಳಿದರು.
ಕಾಂಗ್ರೆಸ್ ಶಾಸಕರ ಸ್ಥಾನಮಾನ ಕುಸಿಯಲಿದೆ ಎಂಬ ಮಾತುಗಳು ಕೇವಲ ಊಹಾಪೋಹಗಳಾಗಿವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
