ಮಧುರೈ,ನ.25- ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ದೀಪಥೂನ್ ಸ್ತಂಭದಲ್ಲಿ ಕಾರ್ತಿಗೈ ದೀಪ ಬೆಳಗಿಸುವ ವಿಚಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯದಲ್ಲಿ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ದೀಪಥೂನ್‌ನಲ್ಲಿ ದೀಪ ಬೆಳಗಿಸಲು ಸಾಧ್ಯವಾಗಿಲ್ಲ ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಮತ್ತೊಂದೆಡೆ, ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ನಿನ್ನೆ ದೀಪಥೂನ್‌ನಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ, ನ್ಯಾಯಾಲಯದ ನಿರ್ದೇಶನದಂತೆ ದೀಪ ಬೆಳಗಿಸುವ ಕಾರ್ಯ ನೆರವೇರಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಅನುಸರಣಾ ವರದಿ ಸಲ್ಲಿಸಿರುವ ಮಧುರೈ ಜಿಲ್ಲಾಧಿಕಾರಿ ಕೃಷ್ಣ, ದೀಪ ಬೆಳಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ ದೇವಾಲಯದ ಆಡಳಿತ ಮಂಡಳಿ ಅನುಮತಿ ನೀಡದ ಕಾರಣ ಕಾರ್ಯ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ದೀಪಥೂನ್‌ನಲ್ಲಿ ದೀಪ ಬೆಳಗಿಸುವುದರಿಂದ ಸ್ಥಾಪಿತ ಧಾರ್ಮಿಕ ಪದ್ಧತಿಗಳು ಮತ್ತು ಆಚರಣೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ದೇವಾಲಯ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ ಎಂದು ಜಿಲ್ಲಾಧಿಕಾರಿ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ. ಹೀಗಾಗಿ ಮಂಗಳವಾರ ವಿವಾದಿತ ದೀಪಥೂನ್ ಸ್ತಂಭದಲ್ಲಿ ದೀಪ ಬೆಳಗಿಸುವ ಬದಲು ಉಚ್ಚಿಪಿಳ್ಳಯಾರ್ ದೇವಸ್ಥಾನದ ಸಮೀಪವಿರುವ ಸಾಂಪ್ರದಾಯಿಕ ದೀಪ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿದೆ.
ನ್ಯಾಯಾಂಗ ನಿಂದನೆ ಆರೋಪ
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಭರವಸೆ ನೀಡಿದ್ದ ತಮಿಳುನಾಡು ಸರ್ಕಾರ ಇದೀಗ ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಮದ್ರಾಸ್ ಹೈಕೋರ್ಟ್‌ನ ಅರ್ಜಿದಾರರಲ್ಲಿ ಒಬ್ಬರಾದ ರಾಮ ರವಿಕುಮಾರ್ ಆರೋಪಿಸಿದ್ದಾರೆ.
ದೀಪಥೂನ್‌ನಲ್ಲಿ ದೀಪ ಬೆಳಗಿಸುವುದನ್ನು ತಡೆಯಲು ದೇವಾಲಯದ ಟ್ರಸ್ಟಿಗಳ ಮಂಡಳಿಯನ್ನು ಬಳಸಿಕೊಳ್ಳಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ಸರ್ಕಾರ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ತಕ್ಷಣವೇ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಲು ನಿರಾಕರಿಸಿದೆ. ಈ ಸಂಬಂಧ ಅರ್ಜಿದಾರರು ಪ್ರತ್ಯೇಕವಾಗಿ ಔಪಚಾರಿಕ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದು, ಅರ್ಜಿ ಸಲ್ಲಿಕೆಯಾದ ಬಳಿಕ ಅಗತ್ಯವಿದ್ದರೆ ಸೂಕ್ತ ಆದೇಶ ನೀಡುವುದಾಗಿ ತಿಳಿಸಿದೆ. ಹಿರಿಯ ವಕೀಲ ಗುರು ಕೃಷ್ಣಕುಮಾರ್ ಅವರು ಈ ಸಂಬಂಧ ಶೀಘ್ರದಲ್ಲೇ ಅರ್ಜಿ ಸಲ್ಲಿಸುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
