Homeಇದೀಗ ಬಂದ ಸುದ್ದಿಜಮೀನು ಒತ್ತುವರಿ ತೆರವು ವೇಳೆ ಹಾಡ ಹಗಲೇ ಗುಂಡು ಹಾರಿಸಿ ಯುವಕನ ಹ*ತ್ಯೆ

ಜಮೀನು ಒತ್ತುವರಿ ತೆರವು ವೇಳೆ ಹಾಡ ಹಗಲೇ ಗುಂಡು ಹಾರಿಸಿ ಯುವಕನ ಹ*ತ್ಯೆ

ಬೆಂಗಳೂರು,ನ.27- ಜಮೀನು ಒತ್ತುವರಿ ವಿಚಾರದಲ್ಲಿ ಹಾಡಹಗಲೇ ಗುಂಡು ಹಾರಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ದಾರುಣ ಘಟನೆ ನಗರದ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.
ಲಿಖಿತ್‌ಗೌಡ (25) ಕೊಲೆಯಾದ ಯುವಕ. ಆರೋಪಿ ರಮೇಶ್(60)ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಆಶ್ರಯ ಯೋಜನೆಯ ಮನೆಗಳ ಹಂಚಿಕೆಗಾಗಿ ಜಮೀನು ಗುರುತು ಮಾಡುವ ಕಾರ್ಯ ನಡೆಯುತ್ತಿತ್ತು.

ಈ ವೇಳೆ ಸರ್ಕಾರಿ ಜಮೀನಿನ ಹತ್ತು ಗುಂಟೆ ಜಾಗವನ್ನು ರಮೇಶ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ಸರ್ವೆ ನಡೆಸಲು ಬಂದಿದ್ದಾಗ ಹಳ್ಳ ಇರುವುದನ್ನು ಗಮಿನಿಸಿದ ಅಧಿಕಾರಿಗಳು ಅದನ್ನು ಮುಚ್ಚುವಂತೆ ಗ್ರಾಮಸ್ಥರಿಗೆ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಗ್ರಾಮಸ್ಥರು ಹಳ್ಳವನ್ನು ಮುಚ್ಚುತ್ತಿದ್ದಾಗ ರಮೇಶ್ ಸ್ಥಳಕ್ಕೆ ಬಂದು ನನಗೆ ಈ ಹತ್ತು ಗುಂಟೆ ಜಾಗ ಸೇರಬೇಕೆಂದು ತಕರಾರು ಮಾಡಿದ್ದಾರೆ.
ಅಲ್ಲಿ ಕೆಲಸ ಮಾಡುತ್ತಿದ್ದವರು ನಮಗೆ ಆ ಬಗ್ಗೆ ಗೊತ್ತಿಲ್ಲ. ಅಧಿಕಾರಿಗಳು ಹೇಳಿದಂತೆ ನಾವು ಹಳ್ಳ ಮುಚ್ಚುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರಮೇಶ್ ನಡುವೆ ವಾಗ್ವಾದವಾಗಿದೆ.
ಇದರಿಂದ ಕೋಪಗೊಂಡ ರಮೇಶ್ ಮನೆಗೆ ಹೋಗಿ ತನ್ನ ಬಳಿಯಿದ್ದ ಡಿಬಿಪಿ ರೈಫಲ್ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ರಮೇಶ್ ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವಾಗ್ವಾದವಾಗಿದೆ.

ಆ ಸಂದರ್ಭದಲ್ಲಿ ರಮೇಶ್ ತನ್ನ ಬಳಿಯಿದ್ದ ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿದ್ದಾನೆ. ಅದಕ್ಕೆ ಜಗ್ಗದ ಗ್ರಾಮಸ್ಥರು ನಮ್ಮನ್ನೇಕೆ ಹೆದರಿಸುತ್ತಿದ್ದೀಯಾ? ಎಂದು ಪ್ರಶ್ನಿಸಿ ಆತನನ್ನು ಹಿಡಿಯಲು ಹೋಗಿದ್ದಾರೆ. ಗ್ರಾಮಸ್ಥರು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಂಡು ರಮೇಶ್ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಅದಕ್ಕೂ ಬಿಡದ ಗ್ರಾಮಸ್ಥರು ಹೊರಗೆ ಬರುವಂತೆ ಜೋರಾಗಿ ಗಲಾಟೆ ಮಾಡಿದ್ದಾರೆ.

ಆ ವೇಳೆ ರಮೇಶ್ ಮನೆಯ ಕಿಟಕಿಯಿಂದಲೇ ತನ್ನ ಬಳಿಯಿದ್ದ ರೈಫಲ್‌ನಿಂದ ಗುಂಡು ಹಾರಿಸಿದ್ದರಿಂದ ಆ ಗುಂಡು ಲಿಖಿತ್‌ಗೌಡ ಅವರ ಹೊಟ್ಟೆಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ನಂತರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎಸ್‌ಪಿ ಮೊಕ್ಕಾಂ ಹೂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.
ಲಿಖಿತ್‌ಗೌಡ ಗಲಾಟೆ ವೇಳೆ ವಿಡಿಯೋ ಮಾಡಿಕೊಳ್ಳುತ್ತಿದ್ದುದನ್ನು ರಮೇಶ್ ಗಮನಿಸಿ ಗುಂಡು ಹಾರಿಸಿದ್ದಾರೆಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

RELATED ARTICLES

Latest News