ಬೆಂಗಳೂರು,ನ.27- ಚಳಿ-ಮಳೆ-ಗಾಳಿ ಎನ್ನದೆ ಹನ್ನೊಂದು ದಿನಗಳಿಂದ ನಾವು ಮನೆ ಮಠ ಬಿಟ್ಟು ಇಲ್ಲೇ ಪ್ರತಿಭಟನೆ ಮಾಡುತ್ತಿದ್ದೀವಿ. ನಮ್ಮ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕನಿಕರನೂ ಇಲ್ವಲ್ಲಾ ಸಾರ್… ನಮ್ ಶಾಪ ಈ ಸರ್ಕಾರಕ್ಕೆ ತಟ್ಟದೆ ಬಿಡಲ್ಲ ಸಾರ್… ಆಶಾ ಕಾರ್ಯಕರ್ತೆಯೊಬ್ಬರು ಈ ಸಂಜೆ ಪ್ರತಿನಿಧಿ ಹತ್ತಿರ ತಮ್ಮ ಗೋಳು ಹೇಳಿಕೊಂಡಿದ್ದು ಹೀಗೆ… ಮಹಿಳೆಯರು ಇಷ್ಟು ದಿನ ಪ್ರತಿಭಟನೆ ಮಾಡುತ್ತಿದ್ದಾರೆ ಅವರ ಸಮಸ್ಯೆ ಏನು ಎಂದು ಕೇಳೋಣ. ಸೌಹಾರ್ದಯುತವಾಗಿ ಮಾತಾಡೋಣ ಎನ್ನುವ ಸೌಜನ್ಯನೂ ಈ ಸರ್ಕಾರಕ್ಕೆ ಇಲ್ವಲ್ಲಾ ಅನ್ನೋದೇ ನಮ್ಮ ಕೊರಗು ಸಾರ್ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಏನ್ರೀ… ಅವರು ಒಂದೆರಡು ದಿನ ಪ್ರತಿಭಟನೆ ಮಾಡಿ ವಾಪಸ್ ಹೋಗ್ತಾರೆ. ಅವರಿಗೆ ಯಾವ ಸವಲತ್ತೂ ನೀಡಬೇಡಿ ಎಂದು ಸರ್ಕಾರವನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬರು ಉದಾಸೀನವಾಗಿ ಮಾತನಾಡಿದ್ದಾರೆ ಎನ್ನುವುದು ನಮಗೆ ಗೊತ್ತಾಗಿದೆ. ಅದಕ್ಕಾಗಿಯೇ ನಾವು ಚಳಿ-ಮಳೆ ಎನ್ನುವುದನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರೆಸಿದ್ದೇವೆ. ಸಾರ್ ಯಾರೋ ಪುಣ್ಯಾತ್ಮ 5 ಸಾವಿರ ಬೆಡ್ಶಿಟ್ ನೀಡಿದ್ದಾರೆ. ಇನ್ಯಾರೋ ಒಬ್ಬರು ಮಹಿಳೆ ಬಳಕೆ ಮಾಡುವ ಅಗತ್ಯ ವಸ್ತುಗಳನ್ನು ಫ್ರೀಯಾಗಿ ನೀಡಿದ್ದಾರೆ. ಅಂತಹ ಪುಣ್ಯಾತ್ಮರ ಕೃಪೆಯಿಂದ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದೇವೆ ಸಾರ್ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಇಂದಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸಲಿದೆಯೇ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವ ಲಿಖಿತ ಭರವಸೆ ಸಿಗುವ ವಿಶ್ವಾಸವಿದೆ. ಇಲ್ಲದಿದ್ದರೆ ನಮ್ಮ ಹೋರಾಟ ಇದೇ ರೀತಿ ಮುಂದುವರೆಯಲಿದೆ. ಈ ಹೋರಾಟದಲ್ಲಿ ನಮ್ಮ ಪ್ರಾಣ ಹೋದರೂ ಪರ್ವಾಗಿಲ್ಲ ಸಾರ್ ಎಂದು ಆ ಮಹಿಳೆ ಭಾವುಕರಾದರು.
ಇಂದು ಮತ್ತೊಂದು ಸುತ್ತಿನ ಸಂಧಾನ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಅಥವಾ ಆರೋಗ್ಯ ಸಚಿವ ಯು.ಟಿ.ಖಾದರ್ ಅವರೊಂದಿಗೆ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಾದರೂ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ. ನಿನ್ನೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಅವರೊಂದಿಗೆ ಆಶಾ ಕಾರ್ಯಕರ್ತೆಯರ ಮುಖಂಡರು ಎರಡು ಸುತ್ತಿನ ಸಭೆ ನಡೆಸಿದರೂ, ಸಂಧಾನ ಯಶಸ್ವಿಯಾಗಿಲ್ಲ. ಬೇಡಿಕೆಗಳ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಹಿಂದೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ನಡೆದ ಸಂಧಾನ ಪ್ರಯತ್ನಗಳೂ ಫಲ ನೀಡಿಲ್ಲ. ಹೀಗಾಗಿ ಸರ್ಕಾರದ ಮುಂದಿನ ನಡೆ ಏನು ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
15 ಸಾವಿರ ರೂ. ಗೌರವಧನಕ್ಕೆ ಪಟ್ಟು
ತಮ್ಮ ಪ್ರಮುಖ ಬೇಡಿಕೆಯಾದ ಮಾಸಿಕ 15 ಸಾವಿರ ರೂ. ಗೌರವಧನವನ್ನು ಜಾರಿಗೊಳಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೇವಲ ಮೌಖಿಕ ಭರವಸೆ ನೀಡಿದರೆ ಸಾಲದು, ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಈಡೇರಿಸುವ ಭರವಸೆ ನೀಡಬೇಕು ಎಂಬುದು ಅವರ ಸ್ಪಷ್ಟ ನಿಲುವು. ಹತ್ತು ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರು, ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಹೋರಾಟ ಮುಂದುವರಿಸಿದ್ದಾರೆ. ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಇದೆ.
