Homeರಾಜ್ಯಆಶಾ ವಿಚಾರದಲ್ಲಿ ಎನ್‌ಡಿಎ ರಾಜಕೀಯ: ಸಿಎಂ ಡಿಕೆಶಿ ಆರೋಪ

ಆಶಾ ವಿಚಾರದಲ್ಲಿ ಎನ್‌ಡಿಎ ರಾಜಕೀಯ: ಸಿಎಂ ಡಿಕೆಶಿ ಆರೋಪ

ಬೆಂಗಳೂರು, ನ.27- ಆಶಾ ಕಾರ್ಯಕರ್ತೆಯರನ್ನು ಯುಪಿಎ ಸರ್ಕಾರ ನೇಮಿಸಿದೆ ಎಂಬ ಕಾರಣಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವೇತನ ಹೆಚ್ಚಳ ಮಾಡದೇ ದ್ವೇಷ ಸಾಧಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ನಾನು ಇಷ್ಟು ದಿನ ಸುಮ್ಮನೆ ಇದ್ದೆ. ಆದರೆ ಪ್ರತಿಭಟನೆಗೆ ಎನ್‌ಡಿಎ ನಾಯಕರು ಬೆಂಬಲ ನೀಡುತ್ತಿರುವುದು ರಾಜಕೀಯ ಸೇರಿದಂತಾಗಿದೆ ಎಂದರು.

ಆಶಾ ಕಾರ್ಯಕರ್ತೆಯರ ಬಗ್ಗೆ ಎನ್‌ಡಿಎ ನಾಯಕರ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯುಪಿಎ ಆಡಳಿತ ಆಶಾ ಕಾರ್ಯಕರ್ತೆಯರನ್ನು ನೇಮಿಸಿತ್ತು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ದ್ವೇಷ ಸಾಧಿಸುತ್ತಿದೆ. ಕೇಂದ್ರ ಸರ್ಕಾರ ಈವರೆಗೂ ಒಂದೂ ರೂಪಾಯಿ ವೇತನ ಹೆಚ್ಚಳ ಮಾಡಿಲ್ಲ. ಪರಿಸ್ಥಿತಿ ಹೀಗಿರುವಾಗ ಕುಮಾರಸ್ವಾಮಿಯವರಾಗಲಿ, ಬಿಜೆಪಿಯವರಾಗಲಿ ಟೀಕೆ ಮಾಡುವ ನೈತಿಕತೆ ಹೊಂದಿಲ್ಲ ಎಮದು ವಾಗ್ದಾಳಿ ನಡೆಸಿದರು.

ಈವರೆಗೂ ವೇತನ ಹೆಚ್ಚಳ ಮಾಡಿರುವುದು ರಾಜ್ಯ ಸರ್ಕಾರ ಮಾತ್ರ. ಆಶಾ ಕಾರ್ಯಕರ್ತೆಯರು ಕಾಂಗ್ರೆಸ್ಸಿಗರಿಂದ ಸಹಾಯ ಪಡೆದಿದ್ದಾರೆ ಎಂಬ ದ್ವೇಷವು ಬಿಜೆಪಿಯವರಲ್ಲಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹಳಷ್ಟು ಆಶಾ ಕಾರ್ಯಕತೆರ್ಯರು ತಾವು ಮರಳಿ ಕೆಲಸಕ್ಕೆ ಹೋಗುವುದಾಗಿ ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಮಗೆ ನಿಮ್ಮ ಮೇಲೆ ನಂಬಿಕೆ ಇದೆ ಎಂದು ಅವರು ಹೇಳುತ್ತಿರುವುದನ್ನು ಕೇಳಿದ್ದೇನೆ. ಆಶಾ ಕಾರ್ಯಕರ್ತರ ಸಂಘಟನೆಯನ್ನು ವಿಭಜಿಸಬಾರದು ಎಂದು ನಾನು ಸುಮ್ಮನಿದ್ದೇನೆ. ಅವರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ ಎಂದರು. ಸೇವೆ ಮಾಡುತ್ತೇವೆ ಎಂದು ಆಶಾ ಕಾರ್ಯಕರ್ತೆಯರಾಗಿ ಸೇರ್ಪಡೆಯಾಗಿರುತ್ತಾರೆ. ಈಗ ಪ್ರತಿಭಟನೆ ಮಾಡುವುದು ಸರಿಯಲ್ಲ. ಎಲ್ಲರಿಗೂ ಹೋರಾಟದ ಹಕ್ಕುಗಳಿವೆ. ಆದರೆ ಇಂತಹ ವಿಚಾರಗಳಲ್ಲಿ ಹೋರಾಟ ಮಾಡಬಾರದು ಎಂದರು.

ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕರು ತಮ್ಮೊಂದಿಗೆ ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ನನಗೆ ಎಲ್ಲಾ ಅರಿವಿದೆ. ಆದರೆ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದು ಈಗಲೇ ಸಹಿ ಹಾಕಬೇಕು ಎಂದರೆ ಸಾಧ್ಯವಿಲ್ಲ ಎಂದರು. ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡುವ ಬದ್ಧತೆ ತಮಗಿದೆ. ಪ್ರಣಾಳಿಕೆಯ ಭರವಸೆಯಂತೆಯೇ ನಡೆದುಕೊಳ್ಳುತ್ತೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಆಶಾ ಕಾರ್ಯಕರ್ತೆಯರು ನಮ್ಮ ಮಕ್ಕಳು-ಸಹೋದರಿಯರಿದ್ದಂತೆ. ನಮ್ಮ ಮೇಲೆ ನಂಬಿಕೆ ಇಡಿ ಎಂದರು.

ಪ್ರತಿಭಟನೆಯ ಹೆಸರಿನಲ್ಲಿ ಕಾರ್ಯಸಾಧುವಲ್ಲದ 10 ಬೇಡಿಕೆಗಳನ್ನು ಮಂಡಿಸುವ ಪರಿಪಾಠ ಒಳ್ಳೆಯದಲ್ಲ. ಕೆಲಸಕ್ಕೆ ಮರಳಿದರೆ ನಾವು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೊದಲು ಕೇಂದ್ರ ಸರ್ಕಾರದ ಕಡೆಯಿಂದ ವೇತನ ಹೆಚ್ಚಳ ಮಾಡಿಸಲು ಒತ್ತಡ ಹೇರಲಿ ಎಂದು ಹೇಳಿದರು.

RELATED ARTICLES

Latest News