Homeಇದೀಗ ಬಂದ ಸುದ್ದಿಮಹಿಳಾ ಪಿಜಿಗಳಿಗೆ ನುಗ್ಗಿ ಲೈಂಗಿಕ ದೌರ್ಜನ್ಯ: ವಿಕೃತಕಾಮಿ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಮಹಿಳಾ ಪಿಜಿಗಳಿಗೆ ನುಗ್ಗಿ ಲೈಂಗಿಕ ದೌರ್ಜನ್ಯ: ವಿಕೃತಕಾಮಿ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಬೆಂಗಳೂರು,ನ.28-ಮಹಿಳಾ ಪಿಜಿಗಳಿಗೆ ನುಗ್ಗಿ ಲೈಂಗಿಕ ದೌರ್ಜನ್ಯ ಮತ್ತು ಖಾಸಗಿ ಅಂಗ ಪ್ರದರ್ಶಿಸುತ್ತಿದ್ದ ವಿಕೃತಕಾಮಿಯನ್ನು ಚಿಕ್ಕಜಾಲ ಪೊಲೀಸ್‌‍ ಠಾಣೆ ಇನ್‌್ಸಪೆಕ್ಟರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ನರೇಶ್‌ ಅಲಿಯಾಸ್‌‍ ಬೆಟ್ಟನರೇಶ (34) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕೃತ ಕಾಮಿ. ಈತನ ಮೇಲೆ ಮಾನಭಂಗಕ್ಕೆ ಯತ್ನ, ಕಳ್ಳತನ, ದರೋಡೆ ಸೇರಿದಂತೆ ಮುಂತಾದ 15ಕ್ಕೂ ಹೆಚ್ಚು ಪ್ರಕರಣಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿವೆ.

ಈತ ಯಲಹಂಕ ಮತ್ತು ಹುಣಸಮಾರನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹೆಣ್ಣು ಮಕ್ಕಳ ಪಿಜಿಗಳನ್ನು ಗುರಿಯಾಗಿಸಿಕೊಂಡು ಒಳನುಗ್ಗಿ ಮೊಬೈಲ್‌ ಕಳ್ಳತನ ಮಾಡುವುದು ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವ್ಯಸಗುವ ಕೃತ್ಯಗಳಲ್ಲಿ ಭಾಗಿಯಾಗಿದ್ದ. ನಿನ್ನೆ ಬೆಳಗಿನ ಜಾವ ಚಿಕ್ಕಜಾಲ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪಿಜಿಯೊಂದಕ್ಕೆ ನುಗ್ಗಿ ಯುವತಿಯ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದಾಗ ತಕ್ಷಣ ಎಚ್ಚೆತ್ತುಕೊಂಡು ಪ್ರತಿರೋಧವೊಡ್ಡಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.

ಸಹಾಯಕ್ಕಾಗಿ ಆಕೆ ಕೂಗಿಕೊಂಡಾಗ ಅಕ್ಕ-ಪಕ್ಕದ ಕೊಠಡಿಯ ಯುವತಿಯರು ಬರುತ್ತಿದ್ದಂತೆ ಮೊಬೈಲ್‌ ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದನು. ಈ ಆರೋಪಿ ಮತ್ತೊಂದು ಪಿಜಿಗೆ ನುಗ್ಗಿ ಇದೇ ರೀತಿ ಮಾಡಿದ್ದಾನೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್‌‍ ಠಾಣೆಯಲ್ಲಿ ಎರಡು ಪ್ರಕರಣಗಳು, ಅಲ್ಲದೇ ಯಲಹಂಕ ಪಿಜಿಗೆ ನುಗ್ಗಿ ಮೊಬೈಲ್‌ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.

ಚಿಕ್ಕಜಾಲ ವ್ಯಾಪ್ತಿಯಲ್ಲಿ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ದೌರ್ಜನ್ಯವ್ಯಸಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ತಕ್ಷಣ ಆರೋಪಿಯನ್ನು ಬಂಧಿಸಲು ಇನ್‌್ಸಪೆಕ್ಟರ್‌ ಮಲ್ಲಿಕಾರ್ಜುನ ಅವರಿಗೆ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪಿಜಿ ಯುವತಿಯಿಂದ ಆರೋಪಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿ ಕಪ್ಪು ಬಣ್ಣದ ಜರ್ಕಿನ್‌ ಧರಿಸಿಕೊಂಡು ಪಿಜಿಗೆ ಕೆಂಪು ಬಣ್ಣದ ಬೈಕ್‌ನಲ್ಲಿ ಬಂದಿದ್ದನು ಎಂದು ಹೇಳಿದ್ದಾರೆ.

ಈ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಬಂಧಿಸಲು ಇನ್‌್ಸಪೆಕ್ಟರ್‌ ಮುಂದಾಗಿದ್ದಾರೆ. ಈ ಸಂಬಂಧ ರಚಿಸಲಾಗಿದ್ದ ತಂಡದ ಸಿಬ್ಬಂದಿಗಳಾದ ಲಕ್ಷ್ಮಣ್‌ ಹಾಗೂ ಸಚಿನ್‌ ಅವರು ಕಾರ್ಯಾಚರಣೆ ಕೈಗೊಂಡಿದ್ದಾಗ ಆರೋಪಿ ಕಪ್ಪು ಬಣ್ಣದ ಜರ್ಕಿನ್‌ ಹಾಕಿಕೊಂಡು ಬೈಕ್‌ನಲ್ಲಿ ಅತೀ ವೇಗವಾಗಿ ಹೋಗುತ್ತಿದ್ದುದ್ದನ್ನು ಗಮನಿಸಿ ಬೆನ್ನಟ್ಟಿದರಾದರೂ ಆತ ತಪ್ಪಿಸಿಕೊಂಡಿದ್ದ. ಇಲ್ಲೇ ಎಲ್ಲೋ ಸುತ್ತಮುತ್ತ ಓಡಾಡುತ್ತಿದ್ದಾನೆ ಎಂಬುವುದನ್ನು ಅರಿತ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದಾಗ ಆತ ಮತ್ತೆ ಕಾಣಿಸಿಕೊಂಡಿದ್ದಾನೆ. ಹಿಡಿಯಲು ಹೋದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಣರೆಯಾಗಿದ್ದನು.

ಆರೋಪಿಯ ಬೈಕ್‌ನಂಬರ್‌ ಆಧರಿಸಿ ತನಿಖೆ ಕೈಗೊಂಡಾಗ ಇಂದು ಬೆಳಗಿನ ಜಾವ ಬೆಂಗಳೂರು ಉತ್ತರ ತಾಲ್ಲೂಕಿನ ತರಹುಣಸೆಯ ಟೆರ್ರಾಫಾರ್ಮ್‌ ಬಳಿ ಕಾಣಿಸಿಕೊಂಡಿದ್ದಾನೆ. ತಕ್ಷಣ ಸಿಬ್ಬಂದಿ ಬೆನ್ನಟ್ಟುತ್ತಿದ್ದುದ್ದನ್ನು ಗಮನಿಸಿ ಫಾರ್ಮ್‌ ಬಳಿ ಅತಿ ವೇಗವಾಗಿ ಬೈಕ್‌ನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ತಕ್ಷಣ ಸಿಬ್ಬಂದಿ ಆರೋಪಿಯನ್ನು ಬೆನ್ನಟ್ಟಿದಾಗ ಆತ ಫಾರ್ಮ್‌ ಒಳಗೆ ನುಗ್ಗಿದ್ದಾನೆ. ಈ ವಿಷಯವನ್ನು ಸಿಬ್ಬಂದಿ ಇನ್‌್ಸಪೆಕ್ಟರ್‌ಗೆ ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಇನ್‌್ಸಪೆಕ್ಟರ್‌ ಅವರು ಸ್ಥಳಕ್ಕೆ ದಾವಿಸಿ ಬಂದಿದ್ದಾರೆ.

ಆರೋಪಿಯನ್ನು ಟೆರ್ರಾಫಾರ್ಮ್‌ ಒಳಗೆ ಬೆನ್ನಟ್ಟುತ್ತಿದ್ದಾಗ ಸಿಬ್ಬಂದಿ ಲಕ್ಷ್ಮಣ್‌ ಅವರು ಬಿದ್ದು ಗಾಯಗೊಂಡರಾದರೂ ಅದನ್ನು ಲೆಕ್ಕಿಸದೇ ಸಿನಿಮೀಯ ರೀತಿ ಮತ್ತೆ ಎದ್ದು ಓಡಿ ಹಿಡಿಯಲು ಯತ್ನಿಸಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಸಚಿನ್‌ ಹಿಡಿಯಲು ಹೋದಾಗ ಆರೋಪಿ ಅವರಿಗೆ ಚಾಕುವಿನಿಂದ ೆ ಇರಿದಿದ್ದಾನೆ. ಅಷ್ಟರಲ್ಲಿ ಇನ್‌್ಸಪೆಕ್ಟರ್‌ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಎಚ್ಚರಿಸಿದ್ದಾರೆ. ಇನ್‌್ಸಪೆಕ್ಟರ್‌ ಮಾತನ್ನು ಲೆಕ್ಕಿಸದೇ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತರಕ್ಷಣೆಗಾಗಿ ಅವರು ಹಾರಿಸಿದ ಎರಡು ಗುಂಡುಗಳು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ತಕ್ಷಣ ಆರೋಪಿಯನ್ನು ಸುತ್ತುವೆರೆದು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಅಂಬೇಡ್ಕರ್‌ ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಸಿಬ್ಬಂದಿ ಲಕ್ಷ್ಮಣ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Police Shoot and Arrest Women assault

RELATED ARTICLES

Latest News