Homeರಾಜ್ಯಚಾಮುಂಡಿಬೆಟ್ಟದ ಶ್ರೀ ನಂದಿಗೆ 21ನೇ ವರ್ಷದ ಮಹಾಭಿಷೇಕ

ಚಾಮುಂಡಿಬೆಟ್ಟದ ಶ್ರೀ ನಂದಿಗೆ 21ನೇ ವರ್ಷದ ಮಹಾಭಿಷೇಕ

ಮೈಸೂರು,ನ.29- ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದ ಶ್ರೀ ನಂದಿಗೆ 21ನೇ ವರ್ಷದ ಮಹಾಭಿಷೇಕ, ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸುಮಾರು 350 ರಿಂದ 400 ವರ್ಷಗಳ ಇತಿಹಾಸವಿರುವ, 16 ಅಡಿ ಎತ್ತರ ಮತ್ತು 24 ಅಡಿ ಉದ್ದದ ಬೃಹತ್‌ ಏಕಶಿಲಾ ನಂದಿ ವಿಗ್ರಹಕ್ಕೆ ಈ ಮಹಾಭಿಷೇಕ ಸಲ್ಲಿಸಲಾಯಿತು.

ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ನಂದಿಗೆ ಅರ್ಚಕರು ಅಟ್ಟಣಿಗೆಯ ಮೂಲಕ ಸುಮಾರು 90 ನಿಮಿಷಗಳ ಕಾಲ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಕಬ್ಬಿನ ಹಾಲು, ಎಳನೀರು, ಅರಿಶಿನ, ಕುಂಕುಮ, ಶ್ರೀಗಂಧ, ವಿವಿಧ ಹಣ್ಣುಗಳು ಹಾಗೂ ಹೂವುಗಳು ಸೇರಿದಂತೆ ಸುಮಾರು 32ಕ್ಕೂ ಹೆಚ್ಚು ಪವಿತ್ರ ದ್ರವ್ಯಗಳಿಂದ ಅಭಿಷೇಕ ಮಾಡಿದರು. ಶ್ರೀ ನಂದಿ ಆವರಣದಲ್ಲೇ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಫಲಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕ, ಗಂಧಪಂಚಕಾಭಿಷೇಕ, ರುದ್ರಾಭಿಷೇಕ ನೆರವೇರಿತು. ವಿವಿಧ ದ್ರವ್ಯಗಳ ಅಭಿಷೇಕದ ನಂತರ ಶುದ್ಧ ನೀರಿನಿಂದ ಜಲಾಭಿಷೇಕ ಮಾಡಿ, ನಂದಿ ವಿಗ್ರಹವನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಕಳೆದ 20 ವರ್ಷಗಳಿಂದ ನಿರಂತರವಾಗಿ ಚಾಮುಂಡಿಬೆಟ್ಟದ ಶ್ರೀ ನಂದಿ ಸನ್ನಿಧಿಯಲ್ಲೇ ನಡೆದುಕೊಂಡು ಬರುತ್ತಿರುವ ಈ ಮಹಾಭಿಷೇಕ ಪರಂಪರೆಯು 21ನೇ ವರ್ಷದಲ್ಲೂ ಅದೇ ಸ್ಥಳದಲ್ಲಿ ಅತ್ಯಂತ ಭಕ್ತಿಶ್ರದ್ಧೆಯಿಂದ ನಡೆಯಿತು. ಭಕ್ತಾದಿಗಳು ಕುಟುಂಬ ಸಮೇತರಾಗಿ ಶ್ರೀ ನಂದಿ ಆವರಣಕ್ಕೆ ಆಗಮಿಸಿ ದರ್ಶನ ಪಡೆದು, ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಬಳಗ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್‌, ಶಂಕರ್‌, ಕಾನ್ಯಾ ಶಿವಮೂರ್ತಿ, ಮಹೇಶ್‌ ಸುಬ್ಬಣ್ಣ, ಸುಂದರ್‌ ಹಾಗೂ ಎನ್‌. ಗೋವಿಂದ ಅವರು ಉಪಸ್ಥಿತರಿದ್ದರು.

RELATED ARTICLES

Latest News