Homeಇದೀಗ ಬಂದ ಸುದ್ದಿಕ್ಷೇತ್ರ ಪುನರ್‌ವಿಂಗಡಣೆ ಮಸೂದೆ: ಕಾಂಗ್ರೆಸ್‌‍ಗೆ ಸ್ಟಾಲಿನ್‌ ತಿರುಗೇಟು

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ: ಕಾಂಗ್ರೆಸ್‌‍ಗೆ ಸ್ಟಾಲಿನ್‌ ತಿರುಗೇಟು

ಚೆನ್ನೈ, ನ.29- ಲೋಕಸಭೆಯಲ್ಲಿ ನಾಳೆ ಮಂಡನೆಯಾಗಲಿರುವ ಬಹುನಿರೀಕ್ಷಿತ ಕ್ಷೇತ್ರ ಪುನರ್‌ವಿಂಗಡಣೆ ತಿದ್ದುಪಡಿ ಮಸೂದೆ ಮಂಡನೆ ತಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್‌‍ಗೆ ಮತ್ತೆ ಭಾರೀ ಮುಖಭಂಗವಾಗಿದೆ.
ಶತಾಯಗತಾಯ ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸಿಗದಂತೆ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌‍ಗೆ ಒಂದು ಕಾಲದ ನೆಚ್ಚಿನ ಆಪ್ತ ಸ್ನೇಹಿತ ಡಿಎಂಕೆ ಮರ್ಮಾಘಾತ ಕೊಟ್ಟಿದೆ.

ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ರಾಜಕೀಯ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಪ್ರಸ್ತಾವನೆಗೆ ಡಿಎಂಕೆ ಬೆಂಬಲ ಸೂಚಿಸಿರುವ ಬೆನ್ನಲ್ಲೇ, ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟವು ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಮನವೊಲಿಸಲು ಪ್ರಯತ್ನಿಸುತ್ತಿದೆ. ಆದರೆ ತಮಿಳುನಾಡಿನ ಹಿತಾಸಕ್ತಿಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಡಿಎಂಕೆ ನಾಯಕನ ಮನವೊಲಿಕೆಗೆ ಚೆನ್ನೈಗೆ ಹೊರಟಿದ್ದ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌‍ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌, ರೇವಂತ್‌ ರೆಡ್ಡಿ ಹಾಗೂ ವಿ.ಡಿ.ಸತೀಶನ್‌ ಅವರಿಗೆ ಭಾರೀ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡದಂತೆ ರಾಹುಲ್‌ ಗಾಂಧಿ ಮಾಡಿಕೊಂಡ ಮನವಿಗೆ ಅಷ್ಟೇ ನಯವಾಗಿ ಸ್ಟಾಲಿನ್‌ ತಿರುಗೇಟು ಕೊಟ್ಟಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಸ್ಟಾಲಿನ್‌, ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆ ವಹಿಸಿರುವ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿಗೆ ಧನ್ಯವಾದ ಸಲ್ಲಿಸಿದ್ದಾರೆ. ಡಿಎಂಕೆ ಯಾವಾಗಲೂ ತಮಿಳುನಾಡು ಮತ್ತು ಅಲ್ಲಿನ ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಇತಿಹಾಸ ನಮನ್ನು ವೀರಪಾಂಡಿಯ ಕಟ್ಟಬೊಮನ್‌ ಎಂದು ಗುರುತಿಸಬೇಕೇ ಹೊರತು ಎಟ್ಟಪ್ಪನ್‌ ಎಂದು ಅಲ್ಲ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಇಲ್ಲಿ ಕಟ್ಟಬೊಮನ್‌ ಅವರನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರತಿರೋಧದ ಸಂಕೇತವಾಗಿ ಹಾಗೂ ಎಟ್ಟಪ್ಪನ್‌ ಅವರನ್ನು ದ್ರೋಹದ ಸಂಕೇತವಾಗಿ ಉಲ್ಲೇಖಿಸುವ ಮೂಲಕ ತಮಿಳುನಾಡಿನ ಹಿತಾಸಕ್ತಿಗಳ ಪರ ತಮ ಬದ್ಧತೆಯನ್ನು ಸ್ಟಾಲಿನ್‌ ಪ್ರತಿಪಾದಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ಈ ಹಿಂದೆ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಿಸಿದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ರಾಜಕೀಯವಾಗಿ ಅನ್ಯಾಯವಾಗಬಹುದು ಎಂಬುದು ಡಿಎಂಕೆಯ ಪ್ರಮುಖ ಆತಂಕವಾಗಿತ್ತು.

ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯನ್ನು ದಕ್ಷಿಣದ ರಾಜಕೀಯ ಪಕ್ಷಗಳು ಎತ್ತಿಹಿಡಿದಿದ್ದವು. ಆದರೆ ಕೇಂದ್ರ ಸರ್ಕಾರ ತನ್ನ ಪರಿಷ್ಕೃತ ಪ್ರಸ್ತಾವನೆಯಲ್ಲಿ ಡಿಎಂಕೆ ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಪರಿಗಣಿಸಿದೆ ಎಂದು ಸ್ಟಾಲಿನ್‌ ಹೇಳಿದ್ದಾರೆ.

RELATED ARTICLES

Latest News