ಬೆಂಗಳೂರು, ನ.29- ಹಾಸನ-ಚಿಕ್ಕಮಗಳೂರಿನ ಆನೆ ಗಲಾಟೆ, ನಿಗಮ ಮಂಡಲಿಗಳ ನೇಮಕಾತಿಯ ಅಸಹನೆ, ಸಂಪುಟದಲ್ಲಿ ಅವಕಾಶ ವಂಚಿತರ ಅಸಮಾಧಾನಗಳು ಕಾಂಗ್ರೆಸ್ನಲ್ಲಿನ ಒಗ್ಗಟ್ಟನ್ನು ಸವಾಲಿಗಿಟ್ಟಿದ್ದು, ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಗ್ನಿ ಪರೀಕ್ಷೆಯನ್ನಾಗಿಸಿದೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಸಚಿವರ ಹೇಳಿಕೆಗಳು ಆಡಳಿತ ಪಕ್ಷದ ಶಾಸಕರುಗಳಲ್ಲೇ ತೀವ್ರ ಅಸಹನೆಯನ್ನು ಸೃಷ್ಟಿಸಿವೆ. ವಿರೋಧ ಪಕ್ಷಗಳಿಗಿಂತಲೂ ಹೆಚ್ಚಿನದಾಗಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಕುದಿಯುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಬಹಳಷ್ಟು ಶಾಸಕರು, ರಾಜ್ಯ ಸರ್ಕಾರದ ನಡವಳಿಕೆಯ ವಿರುದ್ಧ ಮುಗಿಬಿದ್ದಿದ್ದಾರೆ. ಹಾಲು, ಮೊಸರು ಮತ್ತು ಬಸ್ ಪ್ರಯಾಣ ದರ ಏರಿಕೆ ಹಾಗೂ ಬರ ನಿರ್ವಹಣೆಯಲ್ಲಿನ ವೈಫಲ್ಯಗಳನ್ನು ಅಸ್ತ್ರವಾಗಿ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ. ವಿರೋಧ ಪಕ್ಷಗಳಿಗೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಸರ್ಕಾರದ ನೆರವಿಗೆ ನಿಲ್ಲಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಪಕ್ಷದವರೇ ನಾನಾ ಕಾರಣಗಳಿಂದ ಒಳಗೊಳಗೆ ಕುದಿಯುತ್ತಿರುವುದರಿಂದಾಗಿ ಸಚಿವರು ಮಾತ್ರ ಸರ್ಕಾರದ ರಕ್ಷಣೆಗೆ ನಿಲ್ಲುವಂತಹ ಪರಿಸ್ಥಿತಿ ಇದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯವಾಗಿ ಚಾಣಾಕ್ಷ, ಟ್ರಬಲ್ ಶೂಟರ್ ಎಂದೆಲ್ಲಾ ಹೆಸರು ಪಡೆದಿದ್ದಾರೆ. ಆಡಳಿತ ಪಕ್ಷದ ಶಾಸಕರ ಜೊತೆಗೆ ವಿರೋಧ ಪಕ್ಷದ ಶಾಸಕರನ್ನೂ ಬುಟ್ಟಿಗೆ ಹಾಕಿಕೊಂಡು ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬ ಚರ್ಚೆಗಳು ರಾಜಕೀಯಲ್ಲಿವೆ. ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿಯಿದ್ದು ಈ ಹಂತದಲ್ಲಿ ಹೊಂದಾಣಿಕೆ ರಾಜಕೀಯ ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಾಂಗ್ರೆಸ್ನಲ್ಲಿ ಇತ್ತೀಚೆಗೆ ಬಣ ರಾಜಕೀಯ ಗಳು ತೀವ್ರವಾಗುತ್ತಿದ್ದು, ಅಹಿಂದ ಹೆಸರಿನಲ್ಲಿ ಕೆಲವರು ಗುಂಪುಗೂಡಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ ಗುಂಪುಗಾರಿಕೆಯಿಂದ ಅಪಕೀರ್ತಿಗೀಡಾಗಿತ್ತು. ಭೋಜನಕೂಟ ಹೆಸರಿನಲ್ಲಿ ಶಾಸಕರು ಸಭೆಗಳನ್ನು ನಡೆಸಿ ನಾಯಕತ್ವ ಬದಲಾವಣೆಯ ಬಗ್ಗೆ ವ್ಯಾಪಕ ಸಮಾಲೋಚನೆಗಳಾಗಿದ್ದವು, ಪ್ರಸ್ತುತ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಇನ್ನೂ 6 ತಿಂಗಳು ಕಳೆದಿಲ್ಲ, ಆಗಲೇ ಅಲ್ಲೊಮೆ, ಇಲ್ಲೊಮೆ ಸಣ್ಣದಾಗಿ ನಾಯಕತ್ವ ಬದಲಾವಣೆಯ ಗುಸುಗುಸು ಆರಂಭವಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಾಯಕತ್ವ ಬದಲಾವಣೆ ಚರ್ಚೆಯನ್ನು ಅಪ್ರಸ್ತುತ ಎಂದು ಅಲ್ಲಗೆಳೆದಿದ್ದಾರೆ. ಆದರೂ ನಾಯಕತ್ವದ ವಿಚಾರವಾಗಿ ತುಂತುರು ನಿಂತಿಲ್ಲ. ಬೆಂಗಳೂರಿನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನ ಗಲಾಟೆ, ಗದ್ದಲ ಇದ್ದರೂ ಹೇಗೋ ಸಮಾಪನೆಗೊಳ್ಳುತ್ತದೆ. ಆದರೆ ಬೆಳಗಾವಿಯ ಅಧಿವೇಶನದಲ್ಲಿ ಮಾತ್ರ ಅರ್ಥಪೂರ್ಣ ಚರ್ಚೆ ನಡೆಯಲೇ ಬೇಕು. ಇಲ್ಲದೇ ಹೋದರೆ ಆಗಿನ ಮುಖ್ಯಮಂತ್ರಿ ಮತ್ತು ವಿಧಾನಸಭಾಧ್ಯಕ್ಷರ ಬಗ್ಗೆ ನಕಾರಾತಕ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಹೀಗಾಗಿ ಪ್ರತಿ ಸರ್ಕಾರಕ್ಕೂ ಬೆಳಗಾವಿ ಅಧಿವೇಶನ ಸವಾಲಿನದ್ದಾಗಿರುತ್ತದೆ.
