ಹಾಸನ, ಮೇ 10- ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನೆಟ್ಟಾರು ಹತ್ಯೆ ಆರೋಪಿಗಳಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಶೋಧ ನಡೆಸಿದ್ದ ಎನ್‌ಐಎ ತಂಡ ಸುಳ್ಯ ಮೂಲದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದೆ.
ಸುಳ್ಯ ಮೂಲದ ಮುಸ್ತಾಫ್ ಪೈಚಾರ್, ಸೋಮವಾರಪೇಟೆಯ ಇಲಿಯಾಸ್ ಹಾಗೂ ಸಿರಾಜ್ ಎಂಬುವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಈ ಮೂವರು ಆರೋಪಿಗಳು ಸಕಲೇಶಪುರ ತಾಲೂಕಿನ ಆನೆ ಮಹಲ್‌ನಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು ಅಲ್ಲಿಗೆ ದೌಡಾಯಿಸಿದ ಎನ್‌ಐಎ ತಂಡ ಮೂವರನ್ನು ವಶಕ್ಕೆ ಪಡೆದುಕೊಂಡಿದೆ.
ಸಕಲೇಶಪುರದ ಸಿರಾಜ್ ಅವರ ಬಳಿ ಮುಸ್ತಾಫ್ ಮತ್ತು ಇಲಿಯಾಸ್ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಈ ಇಬ್ಬರು ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪದ ಮೇಲೆ ಸಿರಾಜ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಮುಸ್ತಾಫ್ ಸಕಲೇಶಪುರದ ಆನ್‌ಮಹಲ್‌ನಲ್ಲಿ ಇದ್ದಾನೆ ಎಂಬ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿರಾಜ್ ಜತೆಗೆ ಮುಸ್ತಾಫ್‌ನ ಸ್ನೇಹಿತನಾದ ಇಲಿಯಾಸ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಏನೀದು ಪ್ರಕರಣ:
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡಿ ರಾಜ್ಯದ್ಯಾಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬೊಮಾಯಿ ಸರ್ಕಾರವೇ ಅಲುಗಾಡುವಂತಾಗಿತ್ತು.
ಹೀಗಾಗಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಆರೋಪಿಗಳನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ಇದೀಗ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಸುಳ್ಯದ ಶಾಂತಿನಗರ ನಿವಾಸಿ ಮುಸ್ತಾಫನನ್ನು ಹಾಸನ ಜಿಲ್ಲೆ ಸಕಲೇಶಪುರದ ಆನೆಮಹಲ್ ಆನೆಮಹಲ್ ಬಳಿ ಬಂಧಿಸಿ ಬೆಂಗಳೂರಿನ ಎನ್‌ಐಎ ಕಚೇರಿಗೆ ಕರೆದೊಯ್ದಿದ್ದಾರೆ.