ಬೆಂಗಳೂರು, ಜೂ.8- ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಆರೋಪಿ ಪ್ರಜ್ವಲ್ ರೇವಣ್ಣಗೆ ವಿದೇಶದಲ್ಲಿದ್ದಾಗ ಸಹಾಯ ಮಾಡಿದ ಆತನ ಗೆಳತಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಪೆನ್‌ಡ್ರೈವ್‌ಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ಮತದಾನ ಮುಗಿಸಿಕೊಂಡು ಜರ್ಮನಿಗೆ ಹೋಗಿ ಅಡಗಿಕೊಂಡಿದ್ದರು.
ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೆ ಜರ್ಮನಿಯಲ್ಲಿದ್ದಾಗ ಪ್ರಜ್ವಲ್‌ಗೆ ಆತನ ಗೆಳತಿ ಸಹಾಯ ಮಾಡಿರುವುದು ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಗೆಳತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ವಿದೇಶದಲ್ಲಿದ್ದಾಗ ಆತನ ಗೆಳತಿ ಸಹಾಯ ಮಾಡಿರುವ ಬಗ್ಗೆ ಎಸ್‌ಐಟಿಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ನೀಡಿದ್ದಾರೆ.ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಗಾಗಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ.
ಪ್ರಕರಣ ದಾಖಲಾದ ನಂತರ ಪ್ರಜ್ವಲ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಬಂದಿರಲಿಲ್ಲ. ಎರಡು ಬಾರಿ ವಿಮಾನದ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ಪ್ರಜ್ವಲ್ ಅದನ್ನು ರದ್ದುಪಡಿಸಿದ್ದರು. ತದನಂತರ ಮೇ 31ರಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್ ಬಂದಾಗ ಎಸ್‌ಐಟಿ ಅಧಿಕಾರಿಗಳು ವಿಮಾನನಿಲ್ದಾಣದಲ್ಲೇ ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.