Thursday, April 16, 2026
Homeರಾಜ್ಯಮನ್ರೇಗಾ ಮರು ಸ್ಥಾಪನೆ ಮಾಡುವಂತೆ ಕೇಂದ್ರದ ವಿರುದ್ಧ ಸಿಎಂ ಸಿದ್ದು ಆಕ್ರೋಶ

ಮನ್ರೇಗಾ ಮರು ಸ್ಥಾಪನೆ ಮಾಡುವಂತೆ ಕೇಂದ್ರದ ವಿರುದ್ಧ ಸಿಎಂ ಸಿದ್ದು ಆಕ್ರೋಶ

CM Sidhu lashes out at Centre for reinstating MNREGA

ಬೆಂಗಳೂರು, ಜ.3- ಕೇಂದ್ರದ ಬಿಜೆಪಿ ಸರ್ಕಾರ ತಿದ್ದುಪಡಿಯ ಮೂಲಕ ಹೊಸದಾಗಿ ಜಾರಿಗೊಳಿಸಲು ಯತ್ನಿಸುತ್ತಿರುವ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಸಂಪೂರ್ಣ ರದ್ದು ಮಾಡಿ ಈ ಮೊದಲು ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನೇ ಮರು ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಇತರ ಸಚಿವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ್‌ ಗ್ಯಾರಂಟಿ ಫಾರ್‌ ರೋಜ್ಗಾರ್‌ ಅಂಡ್‌ ಅಜೀವಿಕ್‌ ಮಿಷನ್‌ ಗ್ರಾಮೀಣ ( ವಿಬಿ ಜಿ ರಾಮ್‌ ಜಿ) ಕಾಯ್ದೆ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಪಂಚಾಯತಿಗಳ ಸ್ವಯಂ ಆಡಳಿತದ ಹಕ್ಕನ್ನು
ನಾಶ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ರಾಮೀಣ ಭಾಗದಲ್ಲಿ ದುಡಿಯುವ ವರ್ಗಗಳಿಗೆ ಬೆಂಬಲವಾಗಿರುವ ಮನ್ರೇಗಾ ಕಾನೂನನ್ನು ಕೇಂದ್ರ ಸರ್ಕಾರ ಧ್ವಂಸಗೊಳಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾತ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ) ಬಗ್ಗೆ ಚರ್ಚೆ ಮಾಡಲಾಗಿದೆ. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ 20 ವರ್ಷಗಳ ಹಿಂದೆ ಸಂವಿಧಾನದ ದ್ಯೇಯೋದ್ದೇಶಗಳ ಅಂಶಗಳನ್ನು ಜನರ ಮೂಲಭೂತ ಹಕ್ಕುಗಳನ್ನಾಗಿ ಬದಲಾಯಿಸಿ, ಶಿಕ್ಷಣ, ಉದ್ಯೋಗ, ಮಾಹಿತಿ, ಆಹಾರ ಸೇರಿದಂತೆ ವಿವಿಧ ಹಕ್ಕುಗಳನ್ನು ನೀಡಲಾಗಿತ್ತು. ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿತ್ತು ಎಂದು ಹೇಳಿದರು.

ಈ ರೀತಿಯ ಹಕ್ಕುಗಳ ಪ್ರತಿಪಾದನೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಪ್ರಮುಖವಾಗಿತ್ತು. ಕೇಂದ್ರ ಸರ್ಕಾರ ಈಗ ಅದನ್ನು ರದ್ದುಗೊಳಿಸಿದೆ. ಹೊಸದಾಗಿ ವಿಕಸಿತ ಭಾರತ್‌ ಗ್ಯಾರಂಟಿ ಫಾರ್‌ ರೋಜ್ಗಾರ್‌, ಅಜೀವಿಕ್‌ ಮಿಷನ್‌ ಗ್ರಾಮೀಣ ಕಾಯ್ದೆಯನ್ನು ರೂಪಿಸಿದೆ. ಹೊಸ ಕಾನೂನು ರೂಪಿಸುವಾಗ ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗಿದೆ. ಡಿಸೆಂಬರ್‌ 17ರಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ, ಡಿ.18ರಂದು ಅಂಗೀಕರಿಸಲಾಗಿದೆ. ದೇಶದಲ್ಲಿ 12.16 ಕೋಟಿ ಕಾರ್ಮಿಕರು ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳಾ ಕಾರ್ಮಿಕರಿದ್ದು, ಶೇ.53.61 ರಷ್ಟು ಮಹಿಳಾ ಸಭಾಗಿತ್ವ ಇದೆ. ಶೇ.17ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ.11ರಷ್ಟು ಪರಿಶಿಷ್ಟ ಪಂಗಡದವರು ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 71.18 ಲಕ್ಷ ಸಕ್ರಿಯ ನರೇಗಾ ಕಾರ್ಮಿಕರಿದ್ದಾರೆ. ಇವರಲ್ಲಿ 36.75 ಲಕ್ಷ ಮಹಿಳೆಯರು ತೊಡಗಿಸಿಕೊಂಡಿದ್ದು, ಶೇ.51.6 ಮಹಿಳಾ ಸಹಭಾಗಿತ್ವವಿದೆ ಎಂದು ಹೇಳಿದರು.

ಜನರು ನೆಮದಿಯಿಂದ ಜೀವಿಸುವ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿಯವರ ಕೆಲಸ. ಇದಕ್ಕೆ ಬಿಜೆಪಿ ಬೆಂಬಲಿತ ಆರ್‌ ಎಸ್‌‍ ಎಸ್‌‍ ಮಾರ್ಗದರ್ಶನದ ಕೆಲಸ ಮಾಡುತ್ತದೆ ಎಂದು ಟೀಕಿಸಿದರು.

ಹೊಸದಾಗಿ ರೂಪಿಸಿರುವ ಕಾಯ್ದೆಯಿಂದ ಕಾರ್ಪೊರೇಟ್‌ ಸಂಸ್ಥೆಗಳಿಗೆ ಲಾಭವಾಗಲಿದೆ. ಕಾರ್ಮಿಕರಿಗೆ ಯಾವುದೇ ಲಾಭವಿಲ್ಲ. ರೈತರು ತಮ ಕೃಷಿ ಚಟುವಟಿಕೆಗಳ ಜೊತೆಗೆ, ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ಮಾಡುತ್ತಿದ್ದರು. ಸ್ಥಳೀಯವಾಗಿ ಕೆಲಸ ಸಿಗುತ್ತಿತ್ತು. ಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿಸಿಕೊಂಡು ಊರಿನಲ್ಲೇ ಉಳಿಯುತ್ತಿದ್ದರು. ಕೆಲಸವನ್ನು ಕೇಳಿ ಪಡೆದುಕೊಳ್ಳುವ ಅಧಿಕಾರ ಕಾನೂನಿನಿಂದ ಪ್ರದತ್ತವಾಗಿತ್ತು. 20 ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ರೂಪಿಸಿದಾಗಲೇ ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಯೋಜನೆಯನ್ನು ಲೇವಡಿ ಮಾಡಿ, ಇದು ಆಹಾರದ ಖಾತ್ರಿ ಅಲ್ಲ, ವೋಟ್‌ ಬ್ಯಾಂಕ್‌ ಗ್ಯಾರಂಟಿ ಯೋಜನೆ ಎಂದು ಜರಿದಿದ್ದರು ಎಂದು ತಿರುಗೇಟು ನೀಡಿದರು.

ಕಳೆದ ಹನ್ನೊಂದೂವರೆ ವರ್ಷಗಳಿಂದಲೂ ಅಧಿಕಾರದಲ್ಲಿರುವ ಬಿಜೆಪಿಯವರ ಸಾಧನೆ ಎಂದರೆ ಯೋಜನೆಗಳ ಹೆಸರು ಬದಲಾವಣೆ ಮಾಡುವುದೇ ಆಗಿದೆ. ಈವರೆಗೂ ಮೂವತ್ತು ಯೋಜನೆಗಳ ಹೆಸರನ್ನು ಬದಲಾವಣೆ ಮಾಡಿದ್ದಾರೆ ಅಥವಾ ಕಾನೂನುಗಳನ್ನೇ ಧ್ವಂಸ ಮಾಡಿದ್ದಾರೆ. ನಿರ್ಮಲ್‌ ಭಾರತ್‌ ಯೋಜನೆಯನ್ನು ಸ್ವಚ್ಛ ಭಾರತ್‌ ಎಂದು ಬದಲಾವಣೆ ಮಾಡಲಾಗಿದೆ. ಇಂದಿರಾ ಆವಾಜ್‌ ಯೋಜನೆಯನ್ನು ಪ್ರಧಾನಮಂತ್ರಿ ಅವಾಜ್‌ ಯೋಜನೆಯನ್ನಾಗಿ, ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಬದಲಾಯಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ರೂಪಸಿದ್ದ ಅನೇಕ ಯೋಜನೆಗಳನ್ನು ಬುಡಮೇಲು ಮಾಡಲಾಗಿದೆ ಎಂದು ಟೀಕಿಸಿದರು. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ತಾವು ಡಿಸೆಂಬರ್‌ 30ರಂದು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಗ್ರಾಮೀಣ ಕಾರ್ಮಿಕರು, ಸಣ್ಣ ರೈತರು ತಮ ಬದುಕನ್ನು ಈ ಕಾಯ್ದೆಯ ಮೂಲಕ ಉತ್ತಮ ಪಡಿಸಿಕೊಳ್ಳುತ್ತಿದ್ದರು, ಅದನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದರು.
ಯೋಜನೆಯಡಿ ವರ್ಷಕ್ಕೆ ಕನಿಷ್ಠ ನೂರು ದಿನ ಕಾರ್ಮಿಕರು ತಾವು ವಾಸಿಸುವ ಸ್ಥಳದಲ್ಲೇ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚಿಸಿದ ಸ್ಥಳದಲ್ಲಿ ಮಾತ್ರ ಇನ್ನೂ ಮುಂದೆ ಕೆಲಸ ಮಾಡಬೇಕಿದೆ.

ತಿದ್ದುಪಡಿಯ ಬಳಿಕ ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚ ಭರಿಸಬೇಕಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ಸಂವಿಧಾನದ ಪರಿಚ್ಛೇದ 258 ಮತ್ತು 280ರ ಅಡಿ ರಾಜ್ಯಗಳ ಸ್ವಾಯತ್ತತ್ತೆಗೆ ಧಕ್ಕೆ ಬರುತ್ತಿದೆ. 73 ಮತ್ತು 74ನೇ ತಿದ್ದುಪಡಿಯ ಅನುಸಾರ ಅಧಿಕಾರ ವಿಕೇಂದ್ರೀಕರಣದ ಆಶಯವೂ ನಾಶವಾಗುತ್ತಿದೆ. ವಿಬಿ ಜಿ ರಾಮ್‌ ಜಿ ಸಂಪೂರ್ಣ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

ಮಹಿಳೆಯರು, ದಲಿತರು ಹಾಗೂ ಶೂದ್ರರ ಕೈಯಲ್ಲಿ ಹಣ ಇರಬಾರದು, ಅವರು ಸ್ವಾಭಿಮಾನದಿಂದ ಬದುಕಬಾರದು. ಸಂಪೂರ್ಣ ಸೇವಕರಾಗಿಯೇ ಇರಬೇಕು ಎಂಬುದು ಮನುಸತಿಯ ಆಶಯ. ಆದ್ದರಿಂದ ಪ್ರೇರಣೆ ಪಡೆದ ಆರ್‌ ಎಸ್‌‍ ಎಸ್‌‍ ಮಾರ್ಗದರ್ಶನದಲ್ಲಿ ಬೆಳೆದ ಬಿಜೆಪಿ ಸರ್ಕಾರ, ಹಳ್ಳಿಯ ಅಧಿಕಾರವನ್ನು ದಿಲ್ಲಿ ಸರ್ಕಾರ ಕಿತ್ತುಕೊಂಡಿದೆ ಎಂದು ಹೇಳಿದರು.
ಹೊಸ ಕಾಯ್ದೆಯಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗಲಿದೆ.

ಕನಿಷ್ಠ ಪ್ರಮಾಣದ ರಕ್ಷಣೆಯು ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾರ್ಮಿಕರ ಶೋಷಣೆ ಮತ್ತು ದುಡಿಯುವ ಒತ್ತಡ ಹೆಚ್ಚಾಗಲಿದೆ. ಮಹಿಳೆಯರ ಪಾಲ್ಗೋಳ್ಳುವಿಕೆ ತಗ್ಗಲಿದೆ, ಬಲವಂತದ ವಲಸೆ ಹೆಚ್ಚಾಗಲಿದೆ. ಸ್ಥಳೀಯ ಕಾಮಗಾರಿಗಳನ್ನು ನಿರ್ಧರಿಸುವ ಅಧಿಕಾರ ಪಂಚಾಯಿತಿಗಳಿಂದ ಕಿತ್ತುಕೊಳ್ಳಲಾಗಿದೆ, ಗ್ರಾಮೀಣ ಆಸ್ತಿಗಳ ಸಿಗಲೇ ಸೃಜನೆ ಕಷ್ಟವಾಗಲಿದೆ ಎಂದು ದುಷ್ಪರಿಣಾಮಗಳನ್ನು ವಿವರಿಸಿದರು.

ಹೊಸ ಕಾನೂನನ್ನು ಕಾಂಗ್ರೆಸ್‌‍ ಸರ್ಕಾರ ಸಂಪೂರ್ಣ ವಿರೋಧಿಸಲಿದೆ. ಮನ್ರೇಗಾ ಯೋಜನೆ ಮಹಾತ ಗಾಂಧೀಜಿಯವರ ಕನಸನ್ನು ನನಸು ಮಾಡಲಿತ್ತು. ಮಹಾತ ಗಾಂಧೀಜಿಯನ್ನು ನಾಥುರಾಮ್‌ ಗೋಡ್ಸೆ ಕೊಲೆ ಮಾಡಿದ್ದರು. ಬಿಜೆಪಿಯ ನೇತೃತ್ವ ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರು ಬದಲಾವಣೆಯ ಮೂಲಕ ಎರಡನೇ ಬಾರಿ ಕೊಲೆ ಮಾಡುತ್ತಿದೆ. ಗಾಂಧೀಜಿಯವರ ಮೇಲೆ ಬಿಜೆಪಿಯವರಿಗೆ ಇಷ್ಟೊಂದು ದ್ವೇಷ ಏಕೆ?, ಗಾಂಧಿಜೀ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ತಪ್ಪಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌‍ ಪಕ್ಷ ಕಾಯ್ದೆ ಬದಲಾವಣೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಿದೆ ಎಂದು ಹೇಳಿದರು.

RELATED ARTICLES

Latest News