Friday, November 22, 2024
Homeರಾಜಕೀಯ | Politicsಕಾಂಗ್ರೆಸ್ ಸರ್ಕಾರ ಉರುಳಿಸಲು ನಮ್ಮವರೇ 1000 ಕೋಟಿ ಮೀಸಲಿಟ್ಟಿದ್ದಾರೆ : ಯತ್ನಾಳ್ ಬಾಂಬ್

ಕಾಂಗ್ರೆಸ್ ಸರ್ಕಾರ ಉರುಳಿಸಲು ನಮ್ಮವರೇ 1000 ಕೋಟಿ ಮೀಸಲಿಟ್ಟಿದ್ದಾರೆ : ಯತ್ನಾಳ್ ಬಾಂಬ್

1000 crores to topple the government

ದಾವಣಗೆರೆ, ಸೆ.29– ಕಾಂಗ್ರೆಸ್ ಸರ್ಕಾರ ಉರುಳಿಸಲು ನಮ್ಮವರೇ 1 ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ದವೇ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪೋಟಕ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕೆಡವಿ, ತಾವು ಸಿಎಂ ಆಗಬೇಕೆಂದು ಬಿಜೆಪಿಯ ನಾಯಕರೊಬ್ಬರು ಒಂದು ಸಾವಿರ ಕೋಟಿ ರೂ. ರೆಡಿ ಮಾಡಿಕೊಂಡಿದ್ದಾರೆ.ಡಿಸೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂದು ಭಾವಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಹೇಳದೆ ಆರೋಪಿಸಿದರು.

ಈ ಹಿಂದೆ, ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಹೈಕಮಾಂಡ್ ಗೆ ಯಾರು ಎರಡೂವರೆ ಸಾವಿರ ಕೋಟಿ ರೂ. ಕೊಡುತ್ತಾರೋ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುತ್ತದೆ ಎಂದು ಹೇಳುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದರು. ಈಗ, ಬಿಜೆಪಿ ನಾಯಕರೊಬ್ಬರು ಸಿಎಂ ಆಗಲು 1000 ಕೋಟಿ ರೂ. ಕೂಡಿಟ್ಟುಕೊಂಡಿದ್ದಾರೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಆದರೆ, ಸಾವಿರ ಕೋಟಿ ರೂ. ಕೂಡಿಟ್ಟುಕೊಂಡಿರುವ ಬಿಜೆಪಿ ನಾಯಕ ಯಾರು ಎಂಬುದನ್ನು ಬಹಿರಂಗಪಡಿಲಿಲ್ಲ.

ಕಾಂಗ್ರೆಸ್ ಸರ್ಕಾರವನ್ನು ಕೆಡವಲು ನಮ್ಮ ಪಕ್ಷದವರೇ ಪ್ರಯತ್ನ ನಡೆಸುತ್ತಿದ್ದಾರೆ.ಆದರೆ, ಸರ್ಕಾರ ಅಸ್ಥಿರಗೊಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅವರು ಮುಖ್ಯಮಂತ್ರಿಯಾಗಲು ನಾವು ಬೆಂಬಲ ಕೊಡಬೇಕಲ್ಲವೇ?. ಕಳೆದ ಬಾರಿಯಂತೆ ಎಲ್ಲಾ ಶಾಸಕರು ಆ ನಾಯಕತ್ವಕ್ಕೆ ಮನ್ನಣೆ ಕೊಡುವುದಿಲ್ಲ.ಸರ್ಕಾರ ರಚನೆ ಅವರು ಅಂದುಕೊಂಡಷ್ಟು ಸರಳವಾಗಿಲ್ಲ ಎಂದು ಹೇಳಿದರು.

ಸಿಎಂ ಆಗಬೇಕೆಂದು ಎಲ್ಲರಿಗೂ ಇಷ್ಟವಿರುತ್ತದೆ. ಆದರೆ, ಅದೃಷ್ಟ ಇದ್ದವರಿಗಷ್ಟೇ ಆಗುತ್ತೆ ಎಂದು ಮಾತು ಆರಂಭಿಸಿದ ಅವರು, ರಾಜ್ಯದಲ್ಲಿ ಇದೇ ವರ್ಷ ಡಿಸೆಂಬರ್ ನಲ್ಲಿ ದೊಡ್ಡದಾದ ರಾಜಕೀಯ ಕ್ರಾಂತಿಯೊಂದನ್ನು ಮಾಡಲು ಹಲವಾರು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ತಾವು ಮುಖ್ಯಮಂತ್ರಿಯಾಗಲು ಬಿಜೆಪಿಯ ಒಬ್ಬ ನಾಯಕರು 1000 ಕೋಟಿ ರೂ.ಗಳನ್ನು ಕೂಡಿಟ್ಟುಕೊಂಡಿಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೆಲವರಿಗೆ ಶಾಸಕರನ್ನು ಖರೀದಿ ಮಾಡುವುದು ತುಂಬಾ ಸರಳವಾಗಿದೆ. ಏಕೆಂದರೆ ಹಿಂದೆಯೂ ಇದೇ ರೀತಿ ಖರೀದಿ ಮಾಡಿಯೇ ಕೆಲವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅದರ ಚಾಳಿ ಈಗ ಕೆಲವರು ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದಾರೆ. ಪಕ್ಷದ ಹೈ ಕಮಾಂಡ್ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಯತ್ನಾಳ್ ಹೇಳಿದರು.

ಕೆಲವರಿಗೆ ಯಾರು ಬೇಕಾಗಿಲ್ಲ. ಮುಖ್ಯಮಂತ್ರಿ ಗಾದಿ ಬೇಕಾಗಿದೆ ಅಷ್ಟೇ.ನಮಗೆ ಪಕ್ಷದ ಹಿತ ಮುಖ್ಯ.ಸ್ಥಾನಮಾನಕ್ಕಾಗಿ ಪಕ್ಷವನ್ನು ಒಬ್ಬರ ಕೈಯಲ್ಲಿ ಕೊಡಲು ಸಾಧ್ಯವಿಲ್ಲ. ಹಿಂದೆ ಒಬ್ಬರಿಗೆ ಎಲ್ಲವನ್ನೂ ಕೊಟ್ಟಿದ್ದಕ್ಕೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.ಆದರೆ, ಆಪರೇಷನ್ ಕಮಲಕ್ಕೆ ನನ್ನ ಸಮ್ಮತಿಯಿಲ್ಲ ಎಂದು ಹೇಳಿದ ಅವರು, ಕಳೆದ ಬಾರಿ ಆಪರೇಷನ್ ಕಮಲ ಮಾಡಿದಾಗ ಬಂದಿದ್ದ 17 ಮಂದಿಯಿಂದಲೇ ಬಿಜೆಪಿಯ ಅವಸಾನವಾಗಿದ್ದು.

ಈಗ ಮತ್ತೆ ಅಂಥ ಪರಿಸ್ಥಿತಿ ಬರುವುದು ಬೇಡ ಎಂದರು. ಕಾಂಗ್ರೆಸ್ ಸರ್ಕಾರ ಬಿದ್ದ ಸಂದರ್ಭದಲ್ಲಿ ನಾವು ಚುನಾವಣೆಗೆ ಹೋಗಬೇಕು. ಜನರ ಆಶೀರ್ವಾದ ಪಡೆದು ಗೆದ್ದು ಅಧಿಕಾರಕ್ಕೆ ಬರಬೇಕು. ಆ ಮೂಲಕ, ಆಪರೇಷನ್ ಕಮಲ ಮುಂತಾದ ಭ್ರಷ್ಟಾಚಾರ ವ್ಯವಸ್ಥೆಯನ್ನು ಕೊನೆಗಾಣಿಸಬೇಕು ಎಂದು ಅವರು ಗುಡುಗಿದರು.

ಬೆಳಗಾವಿಯಲ್ಲಿ ಸಭೆ ಆದಮೇಲೆ ರಾಷ್ಟ್ರೀಯ ಸ್ವಯಂ ಸಂಘದ ಸಭೆ ಆಗಿದೆ ಅಲ್ಲಿ ಎಲ್ಲಾ ಹೇಳಿದ್ದೆವೆ.ನಮ್ಮ ಪಕ್ಷದ ಮುಖಂಡರಿಗೆ ತಿಳಿಸುವ ಕೆಲಸ ಮಾಡಿದ್ದೇವೆ.ಯಾರು ಬಿಜೆಪಿ ಮಹಾನ್ ನಾಯಕರು ಯಾರು ಬರುವುದಿಲ್ಲ. ದಾವಣಗೆರೆ ಯಲ್ಲಿ ಗಣೇಶ್ ವೇಳೆ ಗಲಾಟೆ ಆಗಿದೆ ಅದರ ಸಂಬಂದ ಬಂದಿದ್ದೇವೆ ಎಂದು ಯತ್ನಾಳ್ ಹೇಳಿದರು.

ಈ ಹಿಂದೆ, ಬಿಜೆಪಿ ಹೈಕಮಾಂಡ್ ಬಗ್ಗೆ ಹಾಗೂ ರಾಜ್ಯದ ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿರುವ ಅವರು, ಬಿಜೆಪಿಗೆ ಭಾರೀ ಮುಜುಗರ ತಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಮ್ಮ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿ ನೋಡೋಣ ಎಂದು ಸವಾಲು ಹಾಕಿದ್ದೂ ಉಂಟು.

ಈಗಾಗಲೇ ರಾಜ್ಯ ಬಿಜೆಪಿಯಿಂದ ಯತ್ನಾಳ್ ಅವರಿಗೆ ಎಚ್ಚರಿಕೆ ಸಂದೇಶ ಬಂದಿತ್ತು. ಆದರೆ, ಈಗ ಪುನಃ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಬಿಜೆಪಿ ನಾಯಕತ್ವ ಹೇಗೆ ಸ್ವೀಕರಿಸುತ್ತದೆ, ಯಾವ ರೀತಿ ಪ್ರತಿಕ್ರಿಯೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News