ಮಾಗಡಿ, ಅ. 22- ತಾಲ್ಲೂಕಿನಲ್ಲಿ ಕಳೆದ 4 ದಿನಗಳಿಂದಲೂ ಎಡಬಿಡದೆ ಜೋರು ಮಳೆ ಸುರಿಯುತ್ತಿದೆ. ಮಂಚನಬೆಲೆ ಜಲಾಶಯ ಸಂಪರ್ಕ ಸೇತುವೆ ಮುರಿದು ಬಿದ್ದು ಒಂದು ವರ್ಷ ಕಳೆದಿದೆ, ತಾತ್ಕಾಲಿಕವಾಗಿ ನಿರ್ಮಿಸಿದ್ದ ಸಂಪರ್ಕ ಸೇತುವೆ ಕುಸಿದಿದ್ದು, ಬೆಂಗಳೂರು ಮತ್ತು ಮಂಚನ ಬೆಲೆ ಗ್ರಾಮ ಸಂಪರ್ಕ ಸೇತುವೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ ಎಂದು ಎಂದು ಯುವಮುಖಂಡ ಶಿವರಾಜ್ ತಿಳಿಸಿದರು.
ತಾಲ್ಲೂಕಿನ ಕಲ್ಯಾ, ಬೆಳಗುಂಬ, ಕೆಂಪಸಾಗರ, ದೊಡ್ಡಮುದುಗೆರೆ, ನೇತನೇಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದಿವೆ, ಪಟ್ಟಣದ ಗೌರಮ್ಮನ ಕೆರೆ ತುಂಬಿದ್ದು, ಕೆರೆಯೊಳಗೆ ಸಂಗ್ರಹವಾಗಿದ್ದ ಒಳಚರಂಡಿಯ ಕಲುಷಿತ ಮತ್ತು ಕಳೆಯ ಗಿಡಗಳು ಮಳೆಯ ನೀರಿನ ಜೊತೆ ಕೋಡಿಯಲ್ಲಿ ಹೊರಗೆ ಹರಿಯುತ್ತಿವೆ.
ಸತತವಾಗಿ ಸುರಿಯುತ್ತಿರುವಮಳೆಯಿಂದಾಗಿ ಜೇನುಕಲ್ಲು ಇರುಗಳಿಗರ ಹಾಡಿಯಲ್ಲಿ 5 ಮನೆಗಳ ಶೀಟು ಒಡೆದು ಮನೆಗಳು ಕುಸಿದಿವೆ. ಪಟ್ಟಣದ ಸೋಮೇಶ್ವರ ಬಡಾವಣೆಯ ಮಂಜುಳಾ ಮಂಜುನಾಥ್ ಅವರ ಮನೆಗೆ ನೀರು ನುಗ್ಗಿದ್ದು , ಧವಸಧಾನ್ಯಗಳು ನೀರುಪಾಲಾಗಿವೆ. ಕೇಶಿಪ್ ರಸ್ತೆ ನಿರ್ಮಿಸುವವರು ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿರುವ ಕಾರಣ ಮಳೆಯ ನೀರು ಮಂಜುಳಾ ಮಂಜುನಾಥ್ ಅವರ ಮನೆಗೆ ನುಗ್ಗಿವೆ, ಸೂಕ್ತವಾಗಿ ಚರಂಡಿ ಮಾಡಿಸಿಲ್ಲ ಎಂದು ನಿವಾಸಿಗಳು ಆರೋಪಿಸಿದರು.
ಸೋಮೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿ ತುಂಬಿ ಕೋಡಿ ಹರಿದಿದೆ, ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಹಬ್ಬರ ಜೋರಾಗಿದ್ದು, ರಾಗಿ -ಫಸಲು ಹುಲುಸಾಗಿ ಬೆಳೆಯುವ ನಿರೀಕ್ಷೆ ಇದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ, ಮಳೆಯಿಂದ ಹಾನಿಗೆ ಒಳಗಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ತೋಟಗಳು ನೀರಿನಲ್ಲಿ ಮುಳುಗಿದ್ದು, ಬೆಳೆಹಾನಿಯಾಗಿವೆ, ಕೂಡಲೆ ಪರಿಹಾರ ನೀಡಬೇಕು ಎಂದುಹೇಳಿದರು.