ಬಳ್ಳಾರಿ : ಫ್ಲೆಕ್ಸ್ ಅಳವಡಿಕೆ ಸಂಬಂಧ ಶಾಸಕರಾದ ನಾನಾ ಭರತ್ ರೆಡ್ಡಿ ಹಾಗೂ ಜನಾರ್ಧನರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲವೆಯಲ್ಲಿ ಸಾವನ್ನಪ್ಪಿದ್ದ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಬಿಜೆಪಿ 10 ಲಕ್ಷ ಪರಿಹಾರ ನೀಡಿದೆ.
ಬಳ್ಳಾರಿಯಲಿರುವ ರಾಜಶೇಖರ ರೆಡ್ಡಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಜನಾರ್ದನ ರೆಡ್ಡಿ ಮಾಜಿ ಸಚಿವ ಬಿ ಶ್ರೀರಾಮುಲು ಸೇರಿದಂತೆ ಬಿಜೆಪಿ ಪ್ರಮುಖರು ರಾಜಶೇಖರ ರೆಡ್ಡಿ ಅವರ ತಾಯಿ ಅವರಿಗೆ ಹತ್ತು ಲಕ್ಷ ನಗದು ಇರುವ ಚೆಕ್ಕನ್ನು ಹಸ್ತಾಂತರ ಮಾಡಿದರು.
ಇತ್ತೀಚಿಗೆ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ನೇತೃತ್ವದ ಕಾಂಗ್ರೆಸ್ ನಿಯೋಗ 25 ಲಕ್ಷ ರೂ ಪರಿಹಾರವನ್ನು ಕೆಪಿಸಿಸಿ ವತಿಯಿಂದ ನೀಡಿತ್ತು. ಇದರ ಬೆನ್ನಲ್ಲೇ, ಬಿಜೆಪಿ ಕೂಡ 10 ಲಕ್ಷ ರುಪಾಯಿ ಪರಿಹಾರ ನೀಡಿರುವುದು
ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ .
ರಾಜಶೇಖರ್ ರೆಡ್ಡಿ ತಾಯಿ, ಅವರ ಸಹೋದರ, ಮತ್ತು ಸಹೋದರಿ ಸೇರಿದಂತೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಿಜೆಪಿ ನಿಯೋಗ ಅವರ ಸಾವಿಗೆ ನ್ಯಾಯ ಒದಗಿಸುವ ಆಶ್ವಾಸನೆ ನೀಡಿದರು.
ಇದೊಂದು ಆಕಸ್ಮಿಕವಾದ ಘಟನೆ. ನಡೆದಿರುವುದು ವೈಯಕ್ತಿಕವಾಗಿ ನೋವು ತಂದಿದೆ .ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅಭಯ ನೀಡಿದರು. ಇದಕ್ಕೂ ಮುನ್ನ ಬಿಜೆಪಿ ತಂಡ ನಗರದಲ್ಲಿರುವ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
