ಗದಗ,ಜ.17- ಕೆಲ ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭಿಸಿದೆ.
ಇಂದು ಉತ್ಖನನ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಲಕ್ಕುಂಡಿಯ ವೀರಭದ್ರೀಶ್ವರ ದೇವಸ್ಥಾನದ ಎದುರಿನಿಂದ ಉತ್ಖನನ ಕಾರ್ಯ ಇಂದು ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನದ ಉತ್ಖನನದ ವೇಳೆ ಪುರಾತನ ವಸ್ತುವೊಂದು ಪತ್ತೆಯಾಗಿದೆ. ದೊಡ್ದ ಆಕಾರ ಪುರಾತನ ವಸ್ತುವೊಂದು ಉತ್ಖನನ ಜಾಗದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದೂವರೆಗೆ ಉತ್ಖನನ ಜಾಗದಲ್ಲಿ 10 ಮೀಟರ್ ಅಗಲ, 10 ಮೀಟರ್ ಉದ್ದ ಅಗೆಯಲಾಗಿದೆ. ಅಷ್ಟರಲ್ಲಿಯೇ ಒಂದು ಪುರಾತನ ವಸ್ತು ಪತ್ತೆಯಾಗಿದೆ. ಇನ್ನು ಉತ್ಖನನ ನಡೆಯುವ ಸ್ಥಳವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದ್ದು, ಫೋಟೋ , ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ. ಜಿಲ್ಲಾಡಳಿತದಿಂದ ಅನುಮತಿ ಇದ್ದವರನ್ನು ಹೊರತುಪಡಿಸಿ ಸಾರ್ವಜನಿಕರಿಗೂ ಸ್ಥಳದಲ್ಲಿ ನಿಷೇಧ ಹೇರಲಾಗಿದೆ.
ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಬಂಗಾರದ ಆಭರಣ (ನಿಧಿ) ಸಿಕ್ಕ ಬೆನ್ನಲ್ಲೇ ಉತ್ಖನನ ನಡೆಯುತ್ತಿರುವುದು ಕಾಕತಾಳೀಯವಾದರೂ ಸರ್ಕಾರವು ಪೂರ್ವ ನಿಗದಿತ ಯೋಜನೆಯಂತೆ ಶೋಧ ಕಾರ್ಯ ಕೈಗೊಂಡಿದೆ. ನಿ ಸಿಕ್ಕ ಜಾಗದಿಂದ ಸುಮಾರು 250 ಮೀಟರ್ ಅಂತರದಲ್ಲಿ ಶೋಧ ನಡೆಯುತ್ತಿರುವುದು ವಿಶೇಷವಾಗಿದೆ.
ವೈಜ್ಞಾನಿಕ ಕಾರ್ಯಾಚರಣೆ : ಪುರಾತತ್ವ ಇಲಾಖೆಯ ಅಧಿಕಾರಿಗಳು ಉತ್ಖನನದಲ್ಲಿ ತೊಡಗಿರುವ ಸುಮಾರು 50 ಮಂದಿ ಕಾರ್ಮಿಕರಿಗೆ ವಿಶೇಷ ತರಬೇತಿ ನೀಡಿದ್ದು, ಪ್ರಾಚೀನ ವಸ್ತುಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಅತ್ಯಂತ ನಾಜೂಕಿನಿಂದ ಮಣ್ಣು ತೆಗೆಯುವ ಬಗ್ಗೆ ಅಗತ್ಯ ತರಬೇತಿ ನೀಡಿದ್ದಾರೆ.
ತಜ್ಞರ ಅಭಿಮತ :
ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ ಮಾತನಾಡಿ, ಲಕ್ಕುಂಡಿಯ ಐತಿಹಾಸಿಕ ಮಹತ್ವ ಬಿಚ್ಚಿಟ್ಟರು. ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ. ರಾಮನು ಕಿಷ್ಕಿಂಧೆಗೆ ಹೋಗುವ ಮುನ್ನ ಇಲ್ಲಿಗೆ ಭೇಟಿ ನೀಡಿದ್ದ ಎನ್ನಲಾಗುತ್ತದೆ. ಇದು ಚಾಲುಕ್ಯರು, ಹೊಯ್ಸಳರು, ಕಲಚೂರಿಗಳ ಆಳ್ವಿಕೆಯ ನಾಡು. ಇಲ್ಲಿ 101 ಬಾವಿ ಹಾಗೂ 101 ದೇವಸ್ಥಾನಗಳಿದ್ದವು ಎಂಬ ಐತಿಹ್ಯವಿದೆ. ಲಕ್ಕುಂಡಿಯ ನಿಜವಾದ ಇತಿಹಾಸ ಜಗತ್ತಿಗೆ ತಿಳಿಯಬೇಕಾದರೆ ಕನಿಷ್ಠ 50 ಮಂದಿರಗಳ ಉತ್ಖನನವಾಗಬೇಕು ಎಂದರು.
ಉತ್ಖನನ ಕಾರ್ಯ : ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಕ್ರಿಯ ಸಹಯೋಗದೊಂದಿಗೆ ಉತ್ಖನನ ನಡೆಯುತ್ತಿದೆ. ನುರಿತ ತಜ್ಞರು ಮತ್ತು ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಮುಖದಲ್ಲಿ ಉತ್ಖನನ ಕಾರ್ಯ ಕೈಗೊಳ್ಳಲಾಗಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ, ಸದ್ಯಕ್ಕೆ ಮೇಲ್ಪದರದ ಮಣ್ಣನ್ನು ತೆಗೆಯಲಾಗಿದೆ. ಭೂಮಿಯ ನೈಜ ಮಣ್ಣು ಸಿಗುವವರೆಗೆ ಉತ್ಖನನ ಮುಂದುವರಿಯಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ಇಲ್ಲಿ ಏನಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
