Wednesday, April 15, 2026
Homeರಾಜ್ಯಮದ್ಯದಂಗಡಿ ಪರವಾನಗಿ ನೀಡಲು ಸಚಿವರ ಹೆಸರಲ್ಲಿ ಅಧಿಕಾರಿಗಳ ಲಂಚಾವತಾರ : ಕಾಂಗ್ರೆಸ್‌‍ಗೆ ಕಸಿವಿಸಿ

ಮದ್ಯದಂಗಡಿ ಪರವಾನಗಿ ನೀಡಲು ಸಚಿವರ ಹೆಸರಲ್ಲಿ ಅಧಿಕಾರಿಗಳ ಲಂಚಾವತಾರ : ಕಾಂಗ್ರೆಸ್‌‍ಗೆ ಕಸಿವಿಸಿ

Bribing officials in the name of ministers to issue liquor shop licenses

ಬೆಂಗಳೂರು, ಜ.18- ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು ಸಚಿವರ ಹೆಸರು ಹೇಳಿ, ಕೋಟ್ಯಂತರ ರೂಪಾಯಿ ಲಂಚ ಪಡೆಯುತ್ತಿರುವುದು ಕಾಂಗ್ರೆಸ್‌‍ ಸರ್ಕಾರಕ್ಕೆ ಮತ್ತೊಂದು ಮುಜುಗರ ಉಂಟು ಮಾಡಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಭ್ರಹಾಂಡ ಭ್ರಷ್ಟಚಾರ ನಡೆದಿದೆ. ನಾವು ಭ್ರಷ್ಟಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಕಾಂಗ್ರೆಸ್‌‍ ದೊಡ್ಡ ಧ್ವನಿಯಲ್ಲಿ ಬಡಾಯಿ ಕೊಚ್ಚಿಕೊಂಡು ಜನರನ್ನು ನಂಬಿಸಿ ವಿಧಾನ ಸಭೆ ಚುನಾವಣೆಯಲ್ಲಿ ಮತ ಪಡೆದಿತ್ತು. ಮತದಾನದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಲಂಚಗುಳಿತನದ ದರ ಪಟ್ಟಿಯನ್ನೇ ಪ್ರಕಟಿಸುವ ಮೂಲಕ ಭಾರಿ ಸಂಚಲನ ಮೂಡಿಸಲಾಗಿತ್ತು.

ಕಾಂಗ್ರೆಸ್‌‍ ಭರವಸೆಯನ್ನು ನಂಬಿ ಜನ ಸಮೂಹ ಸನ್ನಿಯಂತೆ ಮತ ಹಾಕಿ, 138 ಸ್ಥಾನ ಗೆಲ್ಲಿಸುವ ಮೂಲಕ ಭರ್ಜರಿ ಬಹುಮತ ನೀಡಿದ್ದರು. ಕಾಂಗ್ರೆಸ್‌‍ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ಬಿಲ್‌ ಪಾವತಿಸಲು ಶೇ.8 ರಿಂದ 15ರಷ್ಟು ಲಂಚ ಕೇಳಲಾಗುತ್ತಿದೆ ಎಂಬ ಆರೋಪವನ್ನು ಗುತ್ತಿಗೆದಾರರು ಮಾಡಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್‌ ಆರೋಪ ಮಾಡಿದ್ದ ಗುತ್ತಿಗೆದಾರರು, ಕಾಂಗ್ರೆಸ್‌‍ ಸರ್ಕಾರದಲ್ಲಿ ಕಮಿಷನ್‌ ದರ ಶೇ.60ಕ್ಕೆ ಏರಿಕೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಬಾಕಿ ಬಿಲ್‌ ಪಾವತಿಯ ನೆಪದಲ್ಲಿ ಗುತ್ತಿಗೆದಾರರನ್ನು ಬೆದರಿಸಿ ಬಾಯಿ ಮುಚ್ಚಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗೊಮೆ ಈಗೊಮೆ ಗುತ್ತಿಗೆದಾರರು ಧ್ವನಿ ಎತ್ತುತ್ತಿದ್ದರಾದರೂ ಅದು ಹೆಚ್ಚು ಚರ್ಚೆಯಾಗಲಿಲ್ಲ.

ಪ್ರಮುಖವಾಗಿ ಮಹರ್ಷಿ ವಾಲಿಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿನ ಹಣವನ್ನು ಅನಾಮತ್ತಾಗಿ ನಕಲಿ ದಾಖಲೆಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಬಲಿಪಶುವಾಗುವ ಆತಂಕದಲ್ಲಿ ಅಧಿಕಾರಿಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದರು. ಇಡೀ ಪ್ರಕರಣ ಬಯಲಿಗೆ ಬಂದಿತ್ತು. ಬಹುಶಃ ಅಧಿಕಾರಿ ಆತಹತ್ಯೆಯಾಗದೆ ಇದ್ದರೆ ಪ್ರಕರಣ ಮುಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳಿದ್ದವು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಆ ಪ್ರಕರಣಕ್ಕೂ ಕಾಂಗ್ರೆಸ್‌‍ ನಾಯಕರು ರಾಜಕೀಯ ಸಂಚು ಎಂಬ ಸಬೂಬು ಹೇಳಿ ಜಾರಿಕೊಳ್ಳುವ ಯತ್ನ ನಡೆಸಿದ್ದರು. ಜಾರಿ ನಿರ್ದೇಶನಾಲಯ ತಲೆ ಹಾಕಿದ್ದರಿಂದಾಗಿ ಸಂಬಂಧ ಪಟ್ಟ ಸಚಿವರ ಬಂಧನವಾಗಿತ್ತು. ತನಿಖೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ರಾಜ್ಯ ಸರ್ಕಾರ ಅಧಿಕಾರಿಗಳನ್ನು ಹೊಣೆ ಮಾಡಿ, ಸಚಿವರನ್ನು ಪಾರು ಮಾಡಿಕೊಳ್ಳುವ ಪ್ರಯತ್ನ ಈಗಲೂ ಮುಂದುವರೆಸಿದೆ. ಅದೇ ಭ್ರಷ್ಟಚಾರ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿ.ನಾಗೇಂದ್ರರನ್ನು ಮುಖ್ಯಮಂತ್ರಿಯವರು ಈಗಲೂ ಆಧರಣೆಯಿಂದಲೇ ನೋಡುವುದು ಮುಂದುವರೆದಿದೆ. ಇತ್ತೀಚೆಗೆ ಬಳ್ಳಾರಿ ಗಲಭೆ ಪ್ರಕರಣದಲ್ಲಿ ಖುದ್ದು ಮುಖ್ಯಮಂತ್ರಿಯವರೇ ನಾಗೇಂದ್ರರಿಗೆ ಕರೆ ಮಾಡಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಯಂತ್ರಿಸುವಂತೆ ಸೂಚನೆ ನೀಡಿರುವುದು ಗಮನಾರ್ಹ.

ಭೋವಿ ಅಭಿವೃದ್ಧಿ ನಿಗಮದಲ್ಲೂ ಕಮಿಷನ್‌ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಿಗಮದ ಅಧ್ಯಕ್ಷರ ರಾಜೀನಾಮೆ ಪಡೆದು ಸರ್ಕಾರ ಕೈತೊಳೆದುಕೊಂಡಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಜಾತಿ ಹೆಸರಿನಲ್ಲಿ ಆರಂಭಿಸಿರುವ ನಿಗಮಗಳು ದುಡ್ಡು ತಿನ್ನುವವರಿಗೆ ಪೋಗದಸ್ತಾದ ಹುಲ್ಲುಗಾವಲಾಗಿವೆ.

ಕಿಯೋನಿಕ್‌್ಸ ಸಂಸ್ಥೆಯಲ್ಲಿ ಬಾಕಿ ಬಿಲ್‌ ಪಾವತಿಯಾಗುತ್ತಿಲ್ಲ ಎಂದು ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು. ಹಿಂದಿನ ಅವಧಿಯಲ್ಲಿ ಭ್ರಷ್ಟಚಾರ ನಡೆದಿದೆ. ಅದನ್ನು ಸರಿ ಪಡಿಸುವವರೆಗೂ ಬಾಕಿ ಪಾವತಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ ನೀಡಿ ಜಾರಿಕೊಂಡರು.
ಸಾರ್ಟ್‌ ಮೀಟರ್‌ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಆರೋಪ ಮಾಡಿದ್ದರು. ಆದರೆ ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾದರು.

ವಸತಿ ಇಲಾಖೆಯಲ್ಲಿ ಮನೆ ಮಂಜೂರು ಮಾಡಲು ಸಚಿವರ ಆಪ್ತ ಸಹಾಯಕರು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಆರೋಪ ಮಾಡಿದ್ದರು. ಆದರೆ ಪಕ್ಷದ ಒಳಗೊಳಗೆ ಅದನ್ನು ಮುಚ್ಚಿ ಹಾಕಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳಪೆ ಔಷಧಿಗಳ ಪರಿಣಾಮದಿಂದ ಬಾಣಂತಿಯರ ಸರಣಿ ಸಾವುಗಳಾದವು. ಪ್ರಯೋಗಾಲಯ ಪರೀಕ್ಷೆಯಲ್ಲಿನ ತಾಂತ್ರಿಕ ತೊಡಕುಗಳನ್ನು ಮುಂದಿಟ್ಟುಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಜವಾಬ್ದಾರಿಯಿಂದ ನುಣಚಿಕೊಂಡರು.

ಕಬ್ಬು ಬೆಲೆ ಕುಸಿತವಾದಾರ ರೈತರು ಪ್ರತಿಭಟನೆ ನಡೆಸಿದ್ದರು. ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅದನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದಾಗ ಸಕ್ಕರೆ ಸಚಿವರು ಸಕ್ಕರೆ ಕಾರ್ಖಾನೆ ಮಾಲೀಕರು ಡಿಜಿಟಲ್‌ ಅಳತೆ ಯಂತ್ರಗಳನ್ನು ಅಳವಡಿಸಲು ಒಪ್ಪುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು. ಸಚಿವರ ಈ ಧೋರಣೆಗೆ ಆಡಳಿತ ಪಕ್ಷದ ಸದಸ್ಯೆರೇ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಖಾನೆ ಮಾಲೀಕರ ವಿಷಯದಲ್ಲಿ ಮುಲ್ಲಾಜು ಏಕೆ ಎಂದು ಪ್ರಶ್ನಿಸಿದ್ದರು. ಮೋಗಸಾಲೆಗೆ ಬಂದ ಕೆಲ ಶಾಸಕರು ವ್ಯಕ್ತ ಪಡಿಸಿದ ಅಭಿಪ್ರಾಯಗಳು ಸಚಿವರ ಬಗ್ಗೆ ಬೇರೆಯದೇ ರೀತಿಯ ಶಂಕೆಯನ್ನು ಹುಟ್ಟು ಹಾಕಿದ್ದವು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚಖಾತ್ರಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಆದರೆ ಅದರಲ್ಲಿ ಕಳೆದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಅನುದಾನ ಬಿಡುಗಡೆಯಾಗಿಲ್ಲ ಎಂಬ ಆರೋಪ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಗಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದರು. ಬಾಕಿ ಕಂತುಗಳನ್ನು ಬಿಡುಗಡೆ ಮಾಡುವುದಾಗಿ ಖುದ್ದು ಮುಖ್ಯಮಂತ್ರಿಯವರೇ ಹೇಳಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಒಂದೆರಡು ಕಂತು ಬಿಡುಗಡೆ ಮಾಡದೇ ಇದ್ದರೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿಯವರು ಉಡಾಫೆಯಿಂದ ಮಾತನಾಡಿ, ಅದೊಂದು ಗಂಭೀರ ವಿಚಾರವೇ ಅಲ್ಲ ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ಒಟ್ಟು ಹಣವನ್ನು ಕಬ್ಬಳಿಸಲಾಗಿದೆ ಎಂದು ಆರೋಪ ಮಾಡುವ ಬಿಜೆಪಿ ಅದಕ್ಕೆ ಪೂರಕ ದಾಖಲೆಗಳನ್ನು ಕೊಟ್ಟಿಲ್ಲ ಎಂಬುದು ವಿಶೇಷ.

ಗೃಹ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಪಡೆಯುತ್ತಿದ್ದ ಲಂಚದ ಪ್ರಮಾಣ 10 ಲಕ್ಷ ರೂಪಾಯಿಗಳಿಂದ ಕೋಟಿ ರೂಪಾಯಿವರೆಗೂ ದಾಟಿದೆ. ಖರ್ಚು ಮಾಡಿದ ಹಣ ಸಂಪಾದಿಸಲು ಪೊಲೀಸ್‌‍ ಅಧಿಕಾರಿಗಳು ಠಾಣೆಗಳಲ್ಲೇ ಅಂಗಡಿ ತೆಗೆದುಕುಳಿತಿದ್ದಾರೆ. ಸಂಚಾರಿ ಪೊಲೀಸರು ರಸ್ತೆಗಿಳಿದು ಮೊದಲಿನಂತೆ ವಾಹನ ಸವಾರರನ್ನು ಸುಲಿಗೆ ಮಾಡಲಾರಂಭಿಸಿದ್ದಾರೆ. 88 ಅಪರಾಧ ಪ್ರಕರಣಗಳಲ್ಲಿ ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಭಾಗಿಯಾಗಿದ್ದಾರೆ.

ಗೃಹ ಸಚಿವರಿಗೆ ಇದ್ಯಾವುದು ಗೊತ್ತೆ ಇರುವುದಿಲ್ಲ ಎಂಬುದು ಕುಚೋದ್ಯ ಮಾತ್ರ.
ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ, ರಾಜ್ಯ ಸರ್ಕಾರಕ್ಕೆ ಯಾವುದೇ ದೋಷವಿದ್ದರೂ ಕ್ಷಮಿಸಿ ಬಿಡುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌‍ ನಾಯಕರು ಇದ್ದಂತೆ ಕಂಡು ಬರುತ್ತಿದೆ. ಆದರೆ ಸರ್ಕಾರದ ಮಟ್ಟದಲ್ಲಿನ ಭ್ರಷ್ಟಚಾರಗಳು, ಅಧಿಕಾರಿಗಳ ಮೇಲಿನ ದರ್ಪ, ದೌರ್ಜನ್ಯ, ಗೂಂಡಾಗಿರಿ ರಾಜ್ಯ ಸರ್ಕಾರದ ಬಗ್ಗೆ ಜನ ಹಿಡಿ ಶಾಪ ಹಾಕುವಂತೆ ಮಾಡುತ್ತಿದೆ.

ಸ್ವಚ್ಚ ಆಡಳಿತ ನೀಡುವುದಾಗಿ ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮುಡಾ ಸುಳಿ, ಭಾರಿ ಮುಜುಗರ ಉಂಟು ಮಾಡಿತ್ತು. ಬಿಜೆಪಿಯನ್ನು ಹಿನಾಮಾನಾ ನಿಂಧಿಸಿದ ಕಾಂಗ್ರೆಸ್‌‍, ಅಧಿಕಾರ ಹಿಡಿದ ಬಳಿಕ ಅಬಕಾರಿ ಇಲಾಖೆಯಲ್ಲಿ ಸಿಎಲ್‌ 7 ಲೈಸೆನ್‌್ಸ ಗೆ ಎರಡುವರೆ ಕೋಟಿ ರೂಪಾಯಿ ದರ ನಿಗದಿ ಮಾಡಿದೆ ಎಂದರೆ ಭ್ರಷ್ಟಚಾರ ದ್ವಿಗುಣವಷ್ಟೆ ಅಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬ ಭಾವನೆಗಳು ಸಾರ್ವತ್ರಿಕವಾಗುತ್ತಿವೆ. ಭ್ರಷ್ಟಚಾರ ಮುಗಿಲು ಮುಟ್ಟಿದೆ ಎಂದು ವಿರೋಧ ಪಕ್ಷಗಳ ಹೇಳಿಕೆ ಕಾಟಾಚಾರದ ಆರೋಪ ಎನ್ನಿಸುತ್ತಿಲ್ಲ.

RELATED ARTICLES

Latest News