Wednesday, April 15, 2026
Homeರಾಜ್ಯಸ್ಪಷನೆ ಕೋರಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಯನ್ನು ವಾಪಸ್‌‍ ಕಳಿಸಿದ ರಾಜ್ಯಪಾಲರು

ಸ್ಪಷನೆ ಕೋರಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಯನ್ನು ವಾಪಸ್‌‍ ಕಳಿಸಿದ ರಾಜ್ಯಪಾಲರು

Governor sends back internal reservation bill for Scheduled Castes for discussion

ಬೆಂಗಳೂರು,ಜ.18- ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಸೂದೆಗೆ ಸ್ಪಷನೆ ಕೋರಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ವಾಪಸ್‌‍ ಕಳುಹಿಸಿದ್ದಾರೆ. ಇದರಿಂದಾಗಿ ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಮೀಸಲಾತಿ ಸೌಲಭ್ಯಗಳ ನ್ಯಾಯಯುತ ಮತ್ತು ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪರಿಶಿಷ್ಟ ಜಾತಿಗಳ ವಿವಿಧ ಉಪ ಪಂಗಡಗಳ ನಡುವೆ 6:6:5 ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಿದ ಶೇಕಡವಾರು ಮೀಸಲಾತಿ ಕೋಟಾವನ್ನು ವಿಭಜಿಸಲಾಗಿತ್ತು. ಈ ಮಸೂದೆಗೆ ಅಂಕಿತ ಕೋರಿ ಕಳೆದ ವಾರ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಮಸೂದೆಗೆ ಹೆಚ್ಚಿನ ಸ್ಪಷ್ಟೀಕರಣ ಕೋರಿ ಅವರಿಗೆ ವಾಪಸ್‌‍ ಕಳುಹಿಸಿದ್ದಾರೆ.

ಈ ಬೆಳವಣಿಗೆಯು ಸರ್ಕಾರದ ಹಲವು ಇಲಾಖೆಗಳ ನೇಮಕಾತಿ ಮೇಲೆ ಪರಿಣಾಮ ಬೀರಲಿದೆ. ಈ ಮಸೂದೆ ಪ್ರಕ್ರಿಯೆ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಇದೀಗ ಮತ್ತಷ್ಟು ವಿಳಂಬವಾಗಲಿದೆ. ಮೂಲಗಳ ಪ್ರಕಾರ ಸರ್ಕಾರ ಒಳ ಮೀಸಲಾತಿ ಸಮಸ್ಯೆ ಬಗೆಹರಿದ ತಕ್ಷಣಕ್ಕೆ ಪೊಲೀಸ್‌‍, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 30 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡಲಿದೆ.

ಸರ್ಕಾರ 2024ರ ಅಕ್ಟೋಬರ್‌ನಿಂದ ನೇಮಕಾತಿಯನ್ನು ನೆನಗುದಿಯಲ್ಲಿಟ್ಟಿದ್ದು, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌‍ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ಏಕವ್ಯಕ್ತಿ ಆಯೋಗವು ಪರಿಶಿಷ್ಟ ಜಾತಿಗಳ ವಿವಿಧ ಉಪ – ಗುಂಪುಗಳಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ನೀಡಿದ ನಿರ್ದಿಷ್ಟ ಶಿಫಾರಸುಗಳನ್ನು ನೇಮಕಾತಿಯಲ್ಲಿ ಜಾರಿಗೆ ತರಲು ಕಾದಿದೆ. ಆಂತರಿಕ ಕೋಟಾ ಸಮಸ್ಯೆಯನ್ನು ಪರಿಹರಿಸದೇ ನೇಮಕಾತಿಗಳೊಂದಿಗೆ ಮುಂದುವರಿಯುವುದರಿಂದ ಈ ಸಮುದಾಯಗಳ ಯುವಕರಿಗೆ ನಷ್ಟವಾಗಲಿದೆ ಎಂಬ ಎಸ್‌‍ಸಿ-ಎಡ ಸಮುದಾಯಗಳ ಬೇಡಿಕೆಯಿಂದ ಸರ್ಕಾರ ಈ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ.

ಎಸ್‌‍ಸಿ ಒಳಮೀಸಲಾತಿ ಕುರಿತು ಆಯೋಗ 2024ರ ಆಗಸ್ಟ್‌ 4ರಂದು ವರದಿ ಮಂಡಿಸಿದ್ದು, ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಅದನ್ನು ಸ್ವೀಕರಿಸಿತ್ತು. 2025ರ ಅಕ್ಟೋಬರ್‌ನಲ್ಲಿ ಎಸ್‌‍ಸಿ ಒಳಮೀಸಲಾತಿ ಕೋಟಾವನ್ನೂ ಕೂಡ ಸೂಚಿಸಿತ್ತು. ಆದರೆ ಇದುವರೆಗೂ ಸರ್ಕಾರ ಎಸ್‌‍ಸಿಗಳಲ್ಲಿ ವರ್ಗಗಳನ್ನು ಗುರುತಿಸಲು ಜಾತಿ ಪ್ರಮಾಣಪತ್ರಗಳನ್ನು ನೀಡುವ ಮಾರ್ಗಸೂಚಿಗಳನ್ನು ಅದು ಹೊರಡಿಸಿಲ್ಲ. ಈ ನಡುವೆ ಒಳಮೀಸಲಾತಿ ಸೂಚಿಸುವ ಆದೇಶಕ್ಕೆ ಕಾನೂನು ಬದ್ಧತೆ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು ಹೆಚ್ಚಿನ ಸ್ಪಷ್ಟೀಕರಣಗಳನ್ನು ಕೋರಿ ಮಸೂದೆಯನ್ನು ಹಿಂದಿರುಗಿಸಿರುವುದರಿಂದ, ನೇಮಕಾತಿಗಳು ಮತ್ತಷ್ಟು ವಿಳಂಬವಾಗುತ್ತವೆ..

2.7 ಲಕ್ಷ ಖಾಲಿ ಹುದ್ದೆಗಳು: ಸರ್ಕಾರದಲ್ಲಿ ಅತಿ ಹೆಚ್ಚು ಉದ್ಯೋಗ ನೇಮಕಾತಿ ನಡೆಸದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ನೀಡಿದ ಅಂಕಿ ಅಂಶದ ಪ್ರಕಾರ ರಾಜ್ಯದ 43 ಇಲಾಖೆಯ 2.73 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಶಿಕ್ಷಣ ಇಲಾಖೆಯಲ್ಲಿ 70,000 ಹಾಗೂ ಆರೋಗ್ಯ ಇಲಾಖೆಯಲ್ಲಿ 35,000 ಹಾಗೂ ಗೃಹ ಇಲಾಖೆಯಲ್ಲಿ 23,500 ಹುದ್ದೆಗಳು ಖಾಲಿ ಇವೆ.

ಈ ಖಾಲಿ ಹುದ್ದೆಗಳು ಭರ್ತಿಯಾಗದೇ ಹಲವು ವರ್ಷಗಳಿಂದ ಹಾಗೇ ಇದ್ದು, ಸರ್ಕಾರ ಇವುಗಳಲ್ಲಿ ಕೆಲವನ್ನಾದರೂ ಭರ್ತಿ ಮಾಡುವ ಒತ್ತಡದಲ್ಲಿದೆ. ಈ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕಳೆದ ತಿಂಗಳು ಧಾರವಾಡದಲ್ಲಿ ಸಾವಿರಾರು ಯುವಕರು ಬೃಹತ್‌ ಪ್ರತಿಭಟನೆ ನಡೆಸಿದ್ದು, ತಮ ಬೇಡಿಕೆ ಈಡೇರುವವರೆಗೆ ಸರ್ಕಾರದ ಮೇಲೆ ಒತ್ತಡ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದರು.

RELATED ARTICLES

Latest News