ಹುಬ್ಬಳ್ಳಿ:ಜ. 22, ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ಗೆ ವಿರುದ್ಧ ವಾಗಿ ನಡೆದುಕೊಳ್ಳುತ್ತಿದೆ. ರಾಜ್ಯಪಾಲರ ಮೂಲಕ ಸಂವಿಧಾನ ಬಾಹಿರ ಕೆಲಸ ಮಾಡಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಟೀಕಿಸಿದರು.
ಹುಬ್ಬಳ್ಳಿ ಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಭಾಷಣ ಸಿದ್ಧಪಡಿಸಿದ್ದಾರೆಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ರಾಜ್ಯ ಸರ್ಕಾರವನ್ನು ಶೀತಲ ಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವೇ ರಾಜ್ಯಪಾಲರನ್ನು ನೇಮಕ ಮಾಡಿದರೂ ಅವರು ಕರ್ನಾಟಕ ರಾಜ್ಯಪಾಲರು. ರಾಜ್ಯ ಸರ್ಕಾರ ತಯಾರಿಸಿದ ಭಾಷಣವನ್ನು ಅವರು ಓದಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ಬರೆದು ಕೊಟ್ಟಿದ್ದು ಓದಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಬಜೆಟ್ ಅನುದಾನ, ಜಿಎಸ್ ಟಿ ಪಾಲು ಹಂಚಿಕೆ ಸೇರಿ ಆರ್ಥಿಕ ವಾಗಿಯೂ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಹಾರಾಷ್ಟ್ರ ನಂತರ ಕೇಂದ್ರಕ್ಕೆ ತೆರಿಗೆ ಪಾಲು ನೀಡುವಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ, ಕರ್ನಾಟಕ ಕ್ಕೆ ಸಿಗುತ್ತಿರುವುದು ಬಹಳ ಕಡಿಮೆ. ಅದು ಸಹ ಸರಿಯಾಗಿ ಕೊಡುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಸಿಂಹಪಾಲು ಸಿಗುತ್ತಿದೆ. ಈ ತಾರತಮ್ಯ ಖಂಡಿಸಿ ಸೂಕ್ತ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಭಾರತದ ಸಿಎಂಗಳ ಸಭೆ ಕರೆದಿದ್ದಾರೆ ಎಂದರು.
ರಾಜ್ಯ ಸರ್ಕಾರ ಗಳ ಸಲಹೆ ಸೂಚನೆ ಪಡೆಯದೇ ಬಹುಮತ ಇದೆಯೆಂದು ನೇರವಾಗಿ ಮನರೇಗಾ ಹೆಸರು ಬದಲಾಯಿಸಿ ವಿಬಿ – ಜಿ ರಾಮ ಜಿ ಯೋಜನೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಸರ್ವಾಧಿಕಾರಿ ಧೋರಣೆಯಾಗಿದೆ. ವಿಬಿ ಜಿ ರಾಮ್ ಜಿ ಎಂಬುದು ರಾಮ ದೇವರ ಹೆಸರಲ್ಲ. ದಶರಥ ಪುತ್ರ ರಾಮ ಅಲ್ಲ, ಸೀತೆ ಪತಿ ರಾಮನು ಇಲ್ಲಿಲ್ಲ ಎಂದು ಟೀಕಿಸಿದರು.
ಕೆಪಿಸಿಸಿ ಯಿಂದ ವೋಟ್ ಚೋರಿ, ಎಸ್ ಐಆರ್, ಮನರೇಗಾ ಕುರಿತು ಜಿಲ್ಲಾ,ತಾಲೂಕು ಹಾಗೂ ಪಂಚಾಯತ್ ಮಟ್ಟದಲ್ಲಿ ಪಕ್ಷದ ಪ್ರಮುಖರಿಗೆ, ಕಾರ್ಯಕರ್ತರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದೇವೆ ಎಂದು ಹೇಳಿದರು.
