ಬೆಂಗಳೂರು,ಜ.22- ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸುವ ವೇಳೆ ರಾಜ್ಯಪಾಲರಿಗೆ ಅಪಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸಿದರೆ, ರಾಷ್ಟ್ರಗೀತೆಗೆ ರಾಜ್ಯಪಾಲರು ಅಗೌರವ ತೋರಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿಂದು ಆರೋಪಿಸಿದರು.
ಈ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಪದೇಪದೇ ಮಾತಿನ ಚಕಮಕಿ, ವಾಗ್ವಾದ, ಆರೋಪ-ಪ್ರತ್ಯಾರೋಪ ನಡೆದು ಸದನದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದ ನಂತರ ರಾಜ್ಯಪಾಲರನ್ನು ಬೀಳ್ಕೊಟ್ಟ ಬಳಿಕ ಸದನ ಮತ್ತೆ ವಂದೇ ಮಾತರಂ ಗೀತೆಯೊಂದಿಗೆ ಸಮಾವೇಶಗೊಂಡಿತು.
ಆರಂಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಈ ಹಂತದಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯಪಾಲರು ನಿರ್ಗಮಿಸುವ ವೇಳೆ ಸದನದಲ್ಲಿ ಅಗೌರವ ತೋರಿದ್ದವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಕೊಟ್ಟಿದ್ದೇವೆ. ನೀವು ಸಂತಾಪ ಸೂಚನೆ ಮಂಡಿಸುವುದಾಗಿ ಹೇಳಿದ್ದೀರಿ. ಆದರೆ ಕಾನೂನು ಸಚಿವರು ಬೇರೊಂದು ವಿಷಯ ಪ್ರಸ್ತಾಪಿಸಲು ಮುಂದಾಗುತ್ತಿದ್ದಾರೆ. ಇದು ಹೇಗೆ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ನಾವು ಭಾಗವಹಿಸುತ್ತೇವೆ ಎಂದು ಹೇಳಿದರು. ಆಗ ಸಭಾಧ್ಯಕ್ಷರು ಕಾನೂನು ಸಚಿವರನ್ನು ಉದ್ದೇಶಿಸಿ ಅಂತಹ ಮಹತ್ವ ಏನಿದೆ? ಎಂದು ಪ್ರಶ್ನಿಸಿದರು.
ಆಗ ಅಶೋಕ್ ಅವರು ಸಂತಾಪಸೂಚನೆಗೂ ಮುನ್ನ ಬೇರೆ ವಿಷಯ ಪ್ರಸ್ತಾಪಿಸಬಹುದೇ?, ರಾಜ್ಯಪಾಲರು ನಿರ್ಗಮಿಸುವ ವೇಳೆ ವಿಘ್ನ ಮಾಡುತ್ತಾರೆ. ಎಂತಹ ರೀತಿ ಸರ್ಕಾರ ನಡೆಸುತ್ತಿದ್ದಾರೆ ? ಎಂದು ಮೂದಲಿಸಿದರು. ಬಿಜೆಪಿ ಶಾಸಕರ ಆಕ್ಷೇಪದ ನಡುವೆಯೇ ಎಚ್.ಕೆ.ಪಾಟೀಲರು ಪ್ರಕಟಣೆಯೊಂದನ್ನು ಓದಲು ಆರಂಭಿಸಿದರು. ಆಗ ಬಿಜೆಪಿ ಸದಸ್ಯರು ತೀವ್ರವಾಗಿ ಅಡ್ಡಿಪಡಿಸಿ, ಸಂತಾಪ ಮಂಡನೆಯಾಗಲಿ. ಆನಂತರ ಈ ವಿಚಾರದ ಬಗ್ಗೆ ನಾವು ನೀಡಿರುವ ಪತ್ರದ ಬಗ್ಗೆಯೂ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯಪಾಲರು ಭಾಷಣ ಓದದೇ ಹೋಗಿದ್ದಾರೆ. ರಾಷ್ಟ್ರಗೀತೆ ಹಾಡುವವರೆಗೂ ಅವರು ಕಾಯದೇ ಹೋಗಿದ್ದಾರೆ ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆದು ಘೋಷಣೆಗಳನ್ನು ಕೂಗಿದರು. ಇದರಿಂದ ಸದನದಲ್ಲಿ ಗದ್ದಲ, ಗೊಂದಲ, ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.
ಗದ್ದಲದ ನಡುವೆಯೇ ಮಾತು ಮುಂದುವರೆಸಿದ ಕಾನೂನು ಸಚಿವರು, ಸಂವಿಧಾನ ಕಾಪಾಡಬೇಕಾದ ರಾಜ್ಯಪಾಲರು ರಾಷ್ಟ್ರಗೀತೆ ಹಾಡಲು ಅವಕಾಶ ನೀಡದೇ ಅಪಮಾನ ಮಾಡಿದ್ದಾರೆ. ನಮ ಈ ವಿಚಾರದ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸಭಾಧ್ಯಕ್ಷರನ್ನು ಕೋರಿದರು.
ಅಶೋಕ್ ಅವರು ವಿಧಾನಸಭೆ ನಿಯಮಾವಳಿಗಳ ಪುಸ್ತಕವನ್ನು ಪ್ರದರ್ಶಿಸಿ ಕಾನೂನು ಸಚಿವರಿಗೆ ಅವಕಾಶ ಕೊಟ್ಟಿದ್ದೀರಿ. ನಾವು ಅಧಿಕೃತವಾಗಿ ಪತ್ರ ಕೊಟ್ಟರೂ ನಮಗೆ ಅವಕಾಶ ಕೊಡಲಿಲ್ಲ. ಪಕ್ಷಪಾತ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಸುನೀಲ್‌ಕುಮಾರ್ ಕೂಡ ಇದಕ್ಕೆ ದನಿಗೂಡಿಸಿ ನಿಯಮಾವಳಿಗಳ ಪ್ರಕಾರ ಸದನ ನಡೆಸಬೇಡವೇ ಎಂದು ಪ್ರಶ್ನಿಸಿದರು.
ಪದೇಪದೇ ಇದೇ ವಿಚಾರ ಪ್ರಸ್ತಾಪವಾಗಿ ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಕಾವೇರಿದ ದನಿಯಲ್ಲಿ ಮಾತಿನ ಚಕಮಕಿ ನಡೆಯಿತು.
ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು ಸಂತಾಪ ನಿರ್ಣಯವನ್ನು ಮಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ನಿರ್ಣಯವನ್ನು ಬೆಂಬಲಿಸಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಬಳಿಕ ಸುನೀಲ್‌ಕುಮಾರ್ ಮಾತನಾಡಿ, ಆಡಳಿತ ಪಕ್ಷದವರೊಂದಿಗೆ ಮಾತ್ರ ಸದನದ ನಡೆಸುವುದಾದರೆ ನಮನ್ನೇಕೆ ಕರೆಯಬೇಕು? ಎಂದು ಪ್ರಶ್ನಿಸಿದರು. ಅಶೋಕ್ ಮತ್ತೆ ಎದ್ದು ನಿಂತು ರಾಜ್ಯಪಾಲರಿಗೆ ಅಪಮಾನ ಮಾಡಿರುವ ವಿಚಾರದ ಬಗ್ಗೆ ಅವಕಾಶ ಕೊಡದೆ ಕಾನೂನು ಸಚಿವರಿಗೆ ಅವಕಾಶ ಕೊಟ್ಟಿದ್ದೀರಿ ಎಂದು ಆಕ್ಷೇಪಿಸಿದರು. ರಾಜ್ಯಪಾಲರಿಗೆ ಅಪಮಾನ ಮಾಡಿರುವ ಮೊದಲ ಅಪರಾಧಿ ಶಾಸಕ ಎಚ್.ಸಿ.ಬಾಲಕೃಷ್ಣ ಎಂದು ಆರೋಪಿಸಿದರು.
ಆಗ ಸಚಿವರಾದ ಪ್ರಿಯಾಂಕ ಖರ್ಗೆ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭಾಧ್ಯಕ್ಷರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿ, ಸಂತಾಪಕ್ಕೂ ಮುನ್ನ ಏಕೆ ಎಚ್.ಕೆ.ಪಾಟೀಲರಿಗೆ ಅವಕಾಶ ಮಾಡಿಕೊಡಲಾಯಿತು ಎಂಬುದನ್ನು ಸ್ಪಷ್ಟಪಡಿಸಿದರು. ಸುನೀಲ್‌ಕುಮಾರ್ ಮಾತನಾಡಿ, ಸಂತಾಪ ಸೂಚನೆಗೂ ಮುನ್ನ ಕಾನೂನು ಸಚಿವರು ರಾಷ್ಟ್ರಗೀತೆಗೆ ರಾಜ್ಯಪಾಲರು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಟ್ಟಿರಲಿಲ್ಲ ಎಂದಾಗ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲ ನಿರ್ಮಾಣವಾಯಿತು.
ಸುನೀಲ್‌ಕುಮಾರ್ ಮಾತು ಮುಂದುವರೆಸಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ ನಿಮಗೆ ಏನೂ ಅನ್ನಿಸಲಿಲ್ಲ ಎಂದು ಛೇಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ಕಚೇರಿಯಲ್ಲಿ ಏಕೆ ರಾಷ್ಟ್ರಧ್ವಜ ಹಾರಿಸಲಿಲ್ಲ ಎಂದು ಪ್ರಶ್ನಿಸಿದರು.
ಎಚ್.ಸಿ.ಬಾಲಕೃಷ್ಣ ಮಧ್ಯಪ್ರವೇಶಿಸಿ ನೀವ್ಯಾರು ಹೇಳಲು, ಅದನ್ನು ಸಭಾಧ್ಯಕ್ಷರು ಹೇಳಬೇಕು ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಅಶೋಕ್ ಮಾತನಾಡಿ, ಮಹಾರಾಜರಿಂದ ಇಲ್ಲಿಯವರೆಗೂ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಈ ಹಿಂದೆ ಹಂಸರಾಜ ಭಾರದ್ವಾಜ್, ಖುರ್ಷಿದ್ ಅಲಂ ಖಾನ್ ಅವರು ಭಾಷಣ ಮಂಡಿಸಿ ಹೋಗಿರುವ ನಿದರ್ಶನವಿದೆ. ಪ.ಬಂಗಾಳ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳು ಇದ್ದು ಕಡ್ಡಾಯವಾಗಿ ಓದಬೇಕೆಂದೇನೂ ಇಲ್ಲ ಆದರೆ ಅಡೆತಡೆ ಮಾಡಬಾರದು ಎಂದಿದೆ. ರಾಜ್ಯಪಾಲರು ನಿರ್ಗಮಿಸುವ ವೇಳೆ ಅಡ್ಡಿಪಡಿಸಿದವರ ಮೇಲೆ ಕ್ರಮವಾಗಬೇಕು. ಕಾನೂನು ಸಚಿವರು ಅಡೆತಡೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸುದೀರ್ಘವಾಗಿ ನಡೆದ ಈ ವಿಚಾರದ ಚರ್ಚೆ ಬಗ್ಗೆ ನಾಳೆ ರೂಲಿಂಗ್ ನೀಡುವುದಾಗಿ ಸಭಾಧ್ಯಕ್ಷರು ಈ ವಿಚಾರದ ಬಗ್ಗೆ ತೆರೆ ಎಳೆದು ಸಂತಾಪ ಸೂಚನಾ ಕಲಾಪವನ್ನು ಮುಂದುವರೆಸಿದರು.
