Wednesday, April 15, 2026
Homeಇದೀಗ ಬಂದ ಸುದ್ದಿರಾಜ್ಯಪಾಲರಿಂದ ಸಂವಿಧಾನ ಉಲ್ಲಂಘನೆ : ಕಾನೂನು ಹೋರಾಟಕ್ಕೆ ಸರ್ಕಾರ ಚಿಂತನೆ

ರಾಜ್ಯಪಾಲರಿಂದ ಸಂವಿಧಾನ ಉಲ್ಲಂಘನೆ : ಕಾನೂನು ಹೋರಾಟಕ್ಕೆ ಸರ್ಕಾರ ಚಿಂತನೆ

ಬೆಂಗಳೂರು, ಜ.22- ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಭಾಷಣದ ಭಾಗಶಃ ಮಾತ್ರ ಓದಿ ನಿರ್ಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನದ ರೀತ್ಯಾ ರಾಜ್ಯಪಾಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಂವಿಧಾನ ಕಲಂ 176 ಮತ್ತು 163 ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದೆ. ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ. ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಮಹಾತ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ-ಮನ್ರೇಗಾವನ್ನು ರದ್ದುಪಡಿಸಿ, ವಿಕಸಿತ ಭಾರತ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್‌-ಗ್ರಾಮೀಣ (ವಿಬಿ-ಜಿ ರಾಮ್‌ ಜಿ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ ಸರ್ಕಾರದ ತೀವ್ರ ವಿರೋಧವಿದೆ ಎಂದರು.

ಮೊದಲನೆಯದಾಗಿ ಕಾಯ್ದೆಯಿಂದ ಮಹಾತಾ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಡಾ.ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತದೆ ಎಂದರು.

ವರ್ಷ ಪೂರ್ತಿ ಕೆಲಸದ ಭರವಸೆ ಇಲ್ಲ:
ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್‌ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಳಲ್ಲಿ ಯಾವಾಗಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೆ ಮತ್ತು ಪಂಚಾಯಿತಿಗಳಿಗೆ ದೊರಕುವ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ವಿವರಿಸಿದರು.

ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಗಳಿಗೆ ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.

ಹೊಸ ಕಾಯ್ದೆ ರದ್ದುಗೊಳ್ಳಲೇಬೇಕು
ಮನ್ರೆಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ ಉದ್ದೇಶ. ನಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನ್ರೆಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ ಹೋರಾಟ ನಡೆಯಲಿದೆ. ಈ ಹಿಂದೆ ರೈತ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನೂ ವಾಪಸ್ಸು ತೆಗೆದುಕೊಳ್ಳುವವರೆಗೆ ನಮ ಹೋರಾಟ ನಡೆಯಲಿದೆ ಎಂದರು.

ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆ:
ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಕಲಂ 176 ಮತ್ತು 163 ರಂತೆ ಸಚಿವ ಸಂಪುಟ ಭಾಷಣವನ್ನು ಓದಲೇಬೇಕಾಗಿದ್ದು ವಾಸ್ತವ ಅಂಶ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡಿರುವ ಪದ್ಧತಿ, ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ ಎಂದರು.

ಕೇಂದ್ರದ ತಪ್ಪು ಮರೆಮಾಚುವ ಯತ್ನ :
ಇದನ್ನು ನಮ ಪಕ್ಷ ಮತ್ತು ಸರ್ಕಾರ, ಶಾಸಕರು, ಎಂಎಲ್‌ಸಿಗಳು ಪ್ರತಿಭಟಿಸಲಿದ್ದಾರೆ. ಇಡೀ ರಾಜ್ಯದಲ್ಲಿ ಹೋರಾಟ ನಡೆಸಲಾಗುವುದು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನಬಾಹಿರ ಕೃತ್ಯ. ರಾಜ್ಯಪಾಲರು ತಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ ಎಂದರು.

ಕಾನೂನು ಹೋರಾಟಕ್ಕೆ ಚಿಂತನೆ :
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್‌ ಸಿಗಳಿಗೆ ವಿತರಿಸಲಾಗಿದೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

RELATED ARTICLES

Latest News