ಬೆಂಗಳೂರು,ಜ.28- ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಇದು ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.
ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ. ಈ ನಡುವೆ ಗುರುವಾರ ಗೈರಾದರೆ ನೋ ವರ್ಕ್ ನೋ ಪೇ ಎಂದು ಕೆಎಸ್ಆರ್ಟಿಸಿ ಹೇಳಿದೆ. ಮತ್ತೊಂದೆಡೆ ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದೇ ಇದ್ದರೆ, ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಸ್ ಸಂಚಾರದ ಮೇಲೆ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ. ಆದರೆ ಕೆಎಸ್ಆರ್ಟಿಸಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಡಿಪೋಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವ ಯೋಜನೆ ಹಾಕಿದೆ. ಅಗತ್ಯವಿದ್ದರೆ ಇತರ ಡಿವಿಷನ್ಗಳಿಂದ ಬಸ್ಗಳನ್ನು ತರಲು ಸಿದ್ಧತೆ ನಡೆಸಲಾಗಿದೆ.
ವೇತನ ಪರಿಷ್ಕರಣೆ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಸಾವಿರಾರು ಸಾರಿಗೆ ನೌಕರರು ಫ್ರೀಡಂಪಾರ್ಕ್ನಲ್ಲಿ ಜಮಾಯಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೂ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಪ್ರಮುಖವಾಗಿ ಎರಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಲೋ ನಡೆಸಲಾಗುತ್ತಿದೆ. ಈ ಪೈಕಿ 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು. 2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಲಾಗುತ್ತಿದೆ. ಇನ್ನು ನಾಳೆ ಸಂಜೆವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದೇ ಹೋದರೆ ಜ.30ರಿಂದ ಸಾರಿಗೆ ನೌಕರರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.
ಇನ್ನೂ ಸಾರಿಗೆ ಸಂಘಟನೆಗಳ ಮತ್ತೊಂದು ಸಂಘಟನೆಯಾದ ಕೆಎಸ್ಆರ್ಟಿಸಿ ನೌಕರರ ಕೂಟವೂ ಸಹ ಪ್ರತಿಭಟನೆಗೆ ಮುಂದಾಗಿದ್ದು, ಶಿವರಾತ್ರಿ ನಂತರ ಫೆ. 15 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.
ಎಲ್ಲಾ ಡಿವಿಷನಲ್ ಕಂಟ್ರೋಲರ್ಗಳು, ಡಿಪೋ ಮ್ಯಾನೇಜರ್ಗಳು ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿ, ಪ್ರಯಾಣಿಕರ ಸೌಲಭ್ಯಕ್ಕೆ ಆದ್ಯತೆ ನೀಡುವಂತೆ ಆದೇಶಿಸಿದ್ದಾರೆ. ಸಾರಿಗೆ ಸೇವೆಯು ಸಾರ್ವಜನಿಕರಿಗೆ ಅತ್ಯಗತ್ಯ ಸೇವೆಯಾಗಿರುವುದರಿಂದ, ಯಾವುದೇ ಕಾರಣಕ್ಕೂ ಸಂಚಾರ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಪ್ರಥಮ ಜವಾಬ್ದಾರಿ ಎಂದು ಒತ್ತಿ ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ :
ಕಾರ್ಮಿಕ ಸಂಘಟನೆಗಳ ಪ್ರಕಾರ, ಸಾರಿಗೆ ನೌಕರರಿಗೆ ಕಳೆದ 38 ತಿಂಗಳಿನಿಂದ ಬಾಕಿ ವೇತನ ಬಂದಿಲ್ಲ. ಇದಲ್ಲದೆ, ಜ-1-2024 ರಿಂದ ಬರಬೇಕಿದ್ದ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬಂದಿಲ್ಲ. ರಾಜ್ಯಾದ್ಯಂತ ದೈನಂದಿನ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಖಚಿತಪಡಿಸಿಕೊಳ್ಳುವ ನೌಕರರಲ್ಲಿ ಈ ವಿಳಂಬವು ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ಯೂನಿಯನ್ ನಾಯಕರು ಹೇಳಿದ್ದಾರೆ.
ನಾಳೆ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಪ್ರತಿಭಟನೆ ಶಾಂತಿಯುತವಾಗಿರುತ್ತದೆ ಎಂದು ಒಕ್ಕೂಟಗಳು ತಿಳಿಸಿವೆ. ಸಮಿತಿ ಸದಸ್ಯರಾದ ಎಚ್.ವಿ.ಅನಂತಸುಬ್ಬ ರಾವ್, ಬಿ .ಜಯದೇವ ಅರಸು, ಎಚ್.ಡಿ.ರೇವಪ್ಪ, ಜಗದೀಶ್ ಎಚ್.ಆರ್. ಮತ್ತು ರಾಜೇಂದ್ರ ಗೌಡ ಜಿ.ಕೆ. ಅವರು ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ನೌಕರರು ತಮ ಬೇಡಿಕೆಗಳನ್ನು ಮಂಡಿಸುವ ಹಕ್ಕು ಹೊಂದಿದ್ದರೂ, ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವ ರೀತಿಯಲ್ಲಿ ಮುಷ್ಕರ ಅಥವಾ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಕೆಎಸ್ಆರ್ಟಿಸಿ ನಿಲುವು ಸ್ಪಷ್ಟಪಡಿಸಿದೆ. ನಾಳೆ ಸಾಮಾನ್ಯವಾಗಿ ಸಂಚರಿಸುವ ಪ್ರಯಾಣಿಕರು ಯಾವುದೇ ತೊಂದರೆ ಎದುರಿಸದಂತೆ ನೋಡಿಕೊಳ್ಳುವುದು ಸಾರಿಗೆ ಇಲಾಖೆಯ ಜವಾಬ್ದಾರಿ ಎಂದು ಎಂಡಿ ಒತ್ತಿ ಹೇಳಿದ್ದಾರೆ.
ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ನೋ ವರ್ಕ್ ನೋ ಪೇ ಎಂದು ಕೆಎಸ್ಆರ್ಟಿಸಿ ಎಂ.ಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.
ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಮುಷ್ಕರ, ಪ್ರತಿಭಟನೆ ಅಥವಾ ಯಾವುದೇ ರೀತಿಯ ಸಾರಿಗೆ ವಿರೋಧಿ ಚಟುವಟಿಕೆಗೆ ಭಾಗಿಯಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಗುರುವಾರ ಯಾವುದೇ ಮುಷ್ಕರ, ಪ್ರತಿಭಟನೆ ಅಥವಾ ಸಾರಿಗೆ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಸೂಚನೆ. ಮುಷ್ಕರಕ್ಕೆ ಬೆಂಬಲ ಸೂಚಿಸುವುದು ಅಥವಾ ಪ್ರಚೋದಿಸುವುದು ಕೂಡ ನಿಷೇಧ. ಡ್ಯೂಟಿಗೆ ಗೈರು ಹಾಜರಾದರೆ ನೋ ವರ್ಕ್ ನೋ ಪೇ ನಿಯಮ ತಕ್ಷಣ ಜಾರಿಗೊಳಿಸಲಾಗುವುದು.
ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರಜೆ ಮಂಜೂರು ಮಾಡಬಾರದು.ಅಗತ್ಯವಿದ್ದರೆ ನೌಕರರ ವಾರದ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು. ದಿನವಿಡೀ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.
