ಬೆಳಗಾವಿ,ಜ.28-ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ದರೋಡೆಯಾದ 400 ಕೋಟಿ ಹಣದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಎಲ್ಲಿಗೆ ಈ ಹಣವನ್ನು ಸಾಗಿಸಲಾಗಿದೆ ಎಂಬುವುದು ನಿಗೂಢವಾಗಿದೆ.ದೇಶದ ಗಮನ ಸೆಳೆದಿರುವ 400 ಕೋಟಿ ಹಣದ ಮೂಲ ಪತ್ತೆಗಾಗಿ ಮಹಾರಾಷ್ಟ್ರದ ಎಸ್‌ಐಟಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಂಟೈನರ್‌ಗಳು ಹಾಗೂ ಅದರಲ್ಲಿ ತುಂಬಿದ್ದ ಹಣ ಯಾರಿಗೆ ಸೇರಿದ್ದು ಎಂಬುವುದು ಸಹ ಇದುವರೆಗೂ ತಿಳಿದು ಬಂದಿಲ್ಲ.ಮಹಾರಾಷ್ಟ್ರದ ಎಸ್‌ಐಟಿ ಪೊಲೀಸರು ಇಬ್ಬರು ಕಂಟೈನರ್‌ಗಳ ಚಾಲಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಪಡೆದುಕೊಂಡರಾದರೂ ಸಹ ಹಣದ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ಕಾನೂನಾತಕ ದಾಖಲೆಗಳಿಲ್ಲದ ಈ ಬೃಹತ್ ಹಣವನ್ನು ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಯಾರೂ ಅಪಹರಿಸಿದ್ದಾರೆ? ಎಲ್ಲಿ ಇಟ್ಟಿದ್ದಾರೆ ಎಂಬುವುದೇ ನಿಗೂಢವಾಗಿದೆ.ಈ ಬಗ್ಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರು ಮಂದಿಯನ್ನು ಈಗಾಗಲೇ ಮಹಾರಾಷ್ಟ್ರದ ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದರಾದರೂ ಹಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ನಡುವೆ ಹಣ ಅಪಹರಿಸಲಾಗಿದೆ ಎಂದು ಹೇಳಲಾಗಿರುವ ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್‌ನಲ್ಲಿ ಪಂಚನಾಮೆ ಆಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೃಹತ್ ಆರ್ಥಿಕ ಅಪರಾಧ ನಡೆದ ಮಾಹಿತಿ ಇದ್ದರೂ ಸಹ ಕೇಂದ್ರೀಯ ತನಿಖಾ ಸಂಸ್ಥೆಗಳು ಗಮನ ಹರಿಸದಿರುವುದು ದುರ್ದೈವ.
