ಬೆಂಗಳೂರು,ಜ.28- ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ವಿಧಾನಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ಕೋಲಾಹಲದ ವಾತಾವರಣ ನಿರ್ಮಿಸಿತ್ತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ಮಾಡಲು ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ನಿನ್ನೆ ಸದನದಲ್ಲಿ ವಂದನ ನಿರ್ಣಯದ ಮೇಲೆ ಚರ್ಚೆ ಮಾಡಿದ ಆಡಳಿತ ಪಕ್ಷದ ಶಾಸಕ ಎ.ಎಸ್.ಪೊನ್ನಣ್ಣ ಅವರ ಹೇಳಿಕೆಗಳು ರಾಜ್ಯಪಾಲರಿಗೆ ಅಗೌರವ ಉಂಟು ಮಾಡಿದೆ. ಈ ಸರ್ಕಾರ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರನ್ನು ಪದೇ ಪದೇ ಅಗೌರವಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಆರ್‌ಸಿಬಿ ವಿಜಯೋತ್ಸವದ ವೇಳೆ ಶಿಷ್ಟಾಚಾರ ಪಾಲನೆ ಮಾಡದೆ ರಾಜ್ಯಪಾಲರನ್ನು ಕರೆತರಲಾಗಿತ್ತು. ಜನವರಿ 22ರಂದು ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರನ್ನು ಕರೆತಂದಾಗಲೂ ಅವಮಾನ ಮಾಡಲಾಗಿದೆ. ಗೌರವಪೂರ್ವಕವಾಗಿ ರಾಜ್ಯಪಾಲರನ್ನು ಕರೆತಂದು ಕಳುಹಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಇಲ್ಲಿ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.
ಈ ಹಿಂದೆ ನಿಮ ರಾಜ್ಯಪಾಲರೊಂದಿಗೆ ಆಗಿನ ಸರ್ಕಾರಗಳು ಯಾವತ್ತೂ ಅವಮಾನ ಮಾಡಿರಲಿಲ್ಲ ಎಂದು ಅಶೋಕ್ ಕೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ದಿನೇಶ್ ಗುಂಡೂರಾವ್ ದನಿಗೂಡಿಸಿದರು.
ಮುಖ್ಯಮಂತ್ರಿಯವರು ರಾಜ್ಯಪಾಲರಲ್ಲಿ ನಿಮವರು, ನಮವರು ಎಂದು ಇರುವುದಿಲ್ಲ. ಅವರು ರಾಜ್ಯದ ರಾಜ್ಯಪಾಲರು. ಅವರಿಗೆ ಸದನದಲ್ಲಿ ಅವಮಾನ ಮಾಡಿಲ್ಲ ನಾನೇ ಕಾರಿನ ಬಳಿ ಹೋಗಿ ಕರೆತಂದಿದ್ದೇನೆ. ಹೋಗುವಾಗಲೂ ಕಾರಿನವರೆಗೂ ಹೋಗಿ ಬಿಟ್ಟು ಬಂದಿದ್ದೇನೆ. ಯಾವ ಹಂತದಲ್ಲೂ ಅಗೌರವ ತೋರಿಲ್ಲ ಎಂದು ಪುನರಚ್ಚುರಿಸಿದರು.
ರಾಜ್ಯಪಾಲರು ನಾವು ಬರೆದುಕೊಟ್ಟ ಭಾಷಣವನ್ನು ಪೂರ್ತಿಯಾಗಿ ಓದಿಲ್ಲ. ಓದಿ ದಾಖಲಿಸಲಾಗಿದೆ ಎಂಬಂತ ನಡೆವಳಿಕೆಗಳಾಗಿವೆ. ಜೈ ಹಿಂದ್ ಎಂದು ಹೇಳುವ ಮೂಲಕ ರಾಜ್ಯಪಾಲರು ನಿರ್ಗಮಿಸಿದ್ದಾರೆ. ಇದು ರಾಜ್ಯಕ್ಕೆ ಮಾಡಿದ ಅನ್ಯಾಯ. ಸಂವಿಧಾನಕ್ಕಾದ ಅಪಚಾರ ಎಂದರು.
ರಾಜ್ಯಪಾಲರಿಗೆ ಅಪಮಾನ ಮಾಡುವ ವಿಚಾರದಲ್ಲಿ ಈ ಸರ್ಕಾರ ಪುನರಾವರ್ತಿತ ಅಪರಾಧಿಯಂತೆ ವರ್ತಿಸುತ್ತಿದೆ ಎಂದು ಅಶೋಕ್ ವಾಗ್ದಾಳಿ ಮಾಡಿದರು. ಇದನ್ನು ವಿರೋಧಿಸಿ ಬಿಜೆಪಿಯ ಎಲ್ಲಾ ಸದಸ್ಯರು ಎದ್ದು ನಿಂತು ಪ್ರತಿರೋಧ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ, ಆರೋಪ, ಪ್ರತ್ಯಾರೋಪಗಳು ಏರಿದ ದನಿಯಲ್ಲಿ ನಡೆದವು.
ಬಿಜೆಪಿಯ ಸುರೇಶ್‌ಕುಮಾರ್ ಅವರು, ರಾಜ್ಯಪಾಲರು ಭಾಷಣ ಮುಗಿಸಿ ಹೋಗುವಾಗ ಅಕ್ಕಪಕ್ಕದಲ್ಲಿದ್ದ ಸಭಾಧ್ಯಕ್ಷರು ಮತ್ತು ಸಭಾಪತಿಯವರು ರಾಷ್ಟ್ರಗೀತೆಗಾಗಿ ಕಾಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಬಹುದಿತ್ತು. ಈಗ ಪದೇ ಪದೇ ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ, ರಾಜ್ಯಪಾಲರು ಹೊರಡುವ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಕಿಲ್ಲ ಎಂದು ತಾವು ನೆನಪಿಸಿದ್ದಾಗಿ ವಿಧಾನಪರಿಷತ್ ಸಭಾಪತಿ ಅವರೇ ಹೇಳಿದ್ದಾರೆ. ಆದರೂ ರಾಜ್ಯಪಾಲರು ರಾಷ್ಟ್ರಗೀತೆ ಹಾಡುವವರೆಗೂ ಕಾಯದೆ ಸದನದಿಂದ ನಿರ್ಗಮಿಸಿದ್ದಾರೆ ಎಂದರು.
ಹೀಗಾಗಿಯೇ ತಾವು ರಾಜ್ಯಪಾಲರು ಸದನದಿಂದ ಓಡಿಹೋಗಿದ್ದಾರೆ ಎಂದು ನಾನು ಹೇಳಿದ್ದೇನೆ. ಅದಕ್ಕೆ ಈಗಲೂ ಬದ್ದನಾಗಿದ್ದೇನೆ ಎಂದು ಪುನರುಚ್ಚರಿಸಿದರು.
ಈ ಹಂತದಲ್ಲಿ ಬಿಜೆಪಿಯ ಸುನೀಲ್‌ಕುಮಾರ್ ನರೇಗಾ ಯೋಜನೆಯ ಬಗ್ಗೆ ಸಂಸತ್‌ನಲ್ಲಿ ಚರ್ಚೆಯಾಗುವ ರಾಹುಲ್ ಗಾಂಧಿ ವಿದೇಶಕ್ಕೆ ಓಡಿಹೋಗಿದ್ದರು. ಅದನ್ನು ನೆನಪು ಮಾಡಿಕೊಂಡು ಆಡಳಿತ ಪಕ್ಷದವರು ಮಾತನಾಡುತ್ತಿದ್ದಾರೆ ಎಂದಾಗ, ಸದನದಲ್ಲಿ ಮತ್ತೊಂದು ಬಾರಿ ಕೋಲಾಹಲ ಸೃಷ್ಟಿಯಾಯಿತು.
ಕಾಂಗ್ರೆಸ್‌ನ ಸದಸ್ಯರು ಸಂಸತ್ ಅಧಿವೇಶನ ನಡೆಯುವಾಗ ಪ್ರಧಾನಿಯವರು ವಿದೇಶಿ ಪ್ರವಾಸದಲ್ಲಿರುತ್ತಾರೆ ಎಂದು ತಿರುಗೇಟು ನೀಡಿದರು.
ಇದು ಮತ್ತೆ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಈ ಸದನದಲ್ಲಿ ರಾಜ್ಯಪಾಲರು ಓದಿದ ಭಾಷಣದ ಮೇಲೆ ವಂದನಾನಿರ್ಣಯ ಚರ್ಚೆಯಾಗಲಿದೆಯೇ ಹೊರತು ರಾಜ್ಯಪಾಲರಿಗೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆಯಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಸುರೇಶ್‌ಕುಮಾರ್ ಅವರು, ವಂದನಾ ನಿರ್ಣಯದ ಪ್ರಸ್ತಾವನೆ ಮಂಡಿಸುವಾಗ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ದಯಪಾಲಿಸಿದ ಭಾಷಣಕ್ಕೆ ವಂದನಾ ನಿರ್ಣಯ ಎಂದು ನಮೂದಿಸಲಾಗಿದೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯರು ರಾಜ್ಯಪಾಲರಿಗೆ ಸರ್ಕಾರ ಅಪಮಾನ ಮಾಡಿದೆ ಅದಕ್ಕಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರೆ, ಆಡಳಿತ ಪಕ್ಷದ ಶಾಸಕರು ರಾಷ್ಟ್ರಗೀತೆಗೆ ರಾಜ್ಯಪಾಲರಿಂದ ಅಪಮಾನವಾಗಿದೆ ಅದಕ್ಕಾಗಿ ರಾಜ್ಯಪಾಲರು ನಾಡಿನ ಕ್ಷಮೆ ಕೇಳಬೇಕೆಂಬ ಆಗ್ರಹ ಕೇಳಿಬಂದಿತ್ತು.
ಇದು ಸದನದ ಉದ್ದಕ್ಕೂ ಕಾವೇರಿದ ಚರ್ಚೆಗೆ ಕಾರಣವಾಯಿತು. ಸಭಾಧ್ಯಕ್ಷರು ಎಲ್ಲರೂ ಶಾಸಕರಾಗುವ ಮುನ್ನ ಕಿರುಚಾಡಿ ಹೋರಾಟ ಮಾಡಿಯೇ ಇಲ್ಲಿಗೆ ಬಂದಿದ್ದಾರೆ. ಆದರೆ ನಮ ನಡುವಳಿಕೆಗಳು ಸದನಕ್ಕೆ ಗೌರವ ತರುವಂತಿರಬೇಕು. 224 ಶಾಸಕರಲ್ಲಿ ಯಾರೂ ಕಡಿಮೆಯಿಲ್ಲ. ವಾದ, ಪ್ರತಿವಾದ, ಗದ್ದಲಗಳೇ ಮುಖ್ಯವಲ್ಲ. ವಿಷಯಾಧಾರಿತ ಚರ್ಚೆಗಳು ನಡೆಯಲಿ ಎಂದು ಗದ್ದಲಕ್ಕೆ ತೆರೆ ಎಳೆಯಲು ಪ್ರಯತ್ನ ಮಾಡಿದರು.
