ಬೆಂಗಳೂರು,ಜ.29- ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ-1 ಚಿತ್ರದ ದೈವ ಆಚರಣೆಯ ಅನುಕರಣೆ ಆರೋಪದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಲಾಗಿತ್ತು. ಕಳೆದ ನವೆಂಬರ್ 28, 2025 ರಂದು ನಡೆದಿತ್ತು. ವಕೀಲ ಪ್ರಶಾಂತ್ ಮೆಥಲ್ ಅವರು ದೂರು ದಾಖಲಿಸಿ, ಕರಾವಳಿ ಕರ್ನಾಟಕದ ಚಾವುಂಡಿ ದೈವ ಸಂಪ್ರದಾಯವನ್ನು ಅವಹೇಳನ ಮಾಡುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳು ಮತ್ತು ಸನ್ನೆಗಳನ್ನು ನಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 196, 299 ಮತ್ತು 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಂಗಳೂರಿನ 1 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 8 ಕ್ಕೆ ಮುಂದೂಡಲಾಗಿದೆ.
ರಣವೀರ್ ಪವಿತ್ರ ದೈವ ಸಂಪ್ರದಾಯಗಳನ್ನು ಅಸಭ್ಯ, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸುವ ಅಣಕ ವೇದಿಕೆ ಪ್ರದರ್ಶನದಲ್ಲಿ ತೊಡಗಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಈ ದೂರಿನಲ್ಲಿ ರಣವೀರ್ ನಟನೆಯ ಸಮಯದಲ್ಲಿ ಪಂಜುರ್ಲಿ ಮತ್ತು ಗುಲಿಗ ದೈವಕ್ಕೆ ಸಂಬಂಧಿಸಿದ ಅಭಿವ್ಯಕ್ತಿಗಳನ್ನು ಅನುಕರಿಸಿದ್ದಾರೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.
ಗೋವಾ ಫಿಲ್ ಫೆಸ್ಟಿವಲ್ ಅಲ್ಲಿ ರಣವೀರ್ ಸಿಂಗ್ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದರು. ಕಾಂತಾರದ ಬಗ್ಗೆ ವಿವರಿಸುವಾಗ ದೈವವನ್ನು ದೆವ್ವ ಅಂತಲೇ ಹೇಳಿದ್ದರು. ಈ ಸಮಯದಲ್ಲಿ ಬಾಲಿವುಡ್‌ನ ದಿಗ್ಗಜರು ಇದ್ದರು. ರಿಷಬ್ ಶೆಟ್ಟಿ ಕೂಡ ಅಲ್ಲೇ ಎದುರು ಕುಳಿತಿದ್ದರು. ಇವರೆಲ್ಲರ ಸಮುಖದಲ್ಲಿಯೇ ರಣವೀರ್ ಸಿಂಗ್ ಮನಸೋ ಇಚ್ಛೆ ಮಾತನಾಡಿದ್ದರು.
ದೈವಗಳನ್ನು ಫೀಮೇಲ್ ಗೋಸ್ಟ್ (ಹೆಣ್ಣು ಪ್ರೇತ) ಎಂದು ಸಂಭೋಧಿಸಿದ್ದ ನಟ ರಣವೀರ್ ಸಿಂಗ್ ಅವರು ಗುಳಿಗ ದೈವ, ಚಾಮುಂಡೇಶ್ವರಿ ಬಗ್ಗೆ ತಪ್ಪಾಗಿ ವರ್ತನೆ ಮಾಡಿದ್ದರು.ರಣವೀರ್ ಸಿಂಗ್ ಯಾವಾಗಲೂ ತುಂಬಾನೇ ಆಕ್ಟೀವ್. ಮಾತಿಗೆ ನಿಂತರೆ ಮುಗಿದೇ ಹೋಯಿತು. ಕಂಟ್ರೋಲ್ ತಪ್ಪುತ್ತದೆ. ಇದೇನು ಮೊದಲ ಬಾರಿಯಲ್ಲ, ಈ ಹಿಂದೆ ಅನೇಕ ವೇದಿಕೆಗಳಲ್ಲಿ ರಣವೀರ್ ಮಾತಿನ ವೇಗದಲ್ಲಿ ಎಡವಟ್ಟು ಮಾಡುತ್ತಲೇ ಇರುತ್ತಾರೆ. ಇದೀಗ ಗೋವಾ ಫಿಲ್ ಫೆಸ್ಟಿವಲ್‌ನಲ್ಲಿ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.
ಕ್ಷಮೆ ಕೇಳಿದ್ದ ರಣವೀರ್ ಸಿಂಗ್ :
ರಣವೀರ್ ಸಿಂಗ್ ವರ್ತನೆ ಮತ್ತು ನಡೆಯನ್ನು ಅನೇಕರು ಟೀಕಿಸಿದ್ದರು. ಸ್ವತಃ ರಿಷಬ್ ಶೆಟ್ಟಿ ಕೂಡ ಈ ರೀತಿ ಮಾಡಬೇಡಿ ಎಂದು ಹೇಳಿದ್ದರು. ಆದರೂ ರಣವೀರ್ ಸಿಂಗ್ ಕೆಟ್ಟದಾಗಿಯೇ ಅನುಕರಣೆ ಮಾಡಿದ್ದರು. ದೈವವನ್ನು ದೆವ್ವ ಎಂದು ಹೇಳಿದ್ದರು. ಇದರಿಂದ ಅನೇಕರು ಬೇಸರ ಪಟ್ಟರು. ಟೀಕೆಗಳೂ ಹೆಚ್ಚಾಗಿಯೇ ಬಂದವು. ಆದರೆ, ಈ ಟೀಕೆಯ ನಂತರ ರಣವೀರ್ ಸಿಂಗ್ ಕ್ಷಮೆ ಕೇಳಿದ್ದರು.
ರಿಷಬ್ ಶೆಟ್ಟಿ ಬಗ್ಗೆ ಗೌರವ ಇದೆ :
ರಿಷಬ್ ಶೆಟ್ಟಿ ಅವರ ಶ್ರಮವನ್ನು ಮೆಚ್ಚಿಕೊಂಡಿದ್ದೇನೆ. ಅದನ್ನೀ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವುದೇ ದೈವವನ್ನು, ಇಲ್ಲವೇ ಸಂಸ್ಕೃತಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ. ಆದರೂ ನನ್ನ ವರ್ತನೆಯಿಂದ ನಿಮಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದರು.
ನನಗೆ ಬೇರೆ ಉದ್ದೇಶ ಏನೂ ಇಲ್ಲ.
ಚಿತ್ರದಲ್ಲಿರುವ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಹೈಲೈಟ್ ಮಾಡುವುದೇ ಆಗಿತ್ತು. ಇಂತಹ ಒಂದು ದೃಶ್ಯವನ್ನು ಮಾಡಲು ಅದೆಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ. ಅದು ನನಗೆ ತುಂಬಾನೆ ಇಷ್ಟ ಆಯಿತು. ಅದನ್ನೀ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ವಿವಾದವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡಿದ್ದರು. ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
