Thursday, April 16, 2026
Homeರಾಜ್ಯಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಕೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಕೆ

Dry weather continues in the state including Bengaluru

ಬೆಂಗಳೂರು,ಜ.29- ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಒಣಹವೆ ಮುಂದುವರಿದಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಅವಧಿಗೆ ಕರ್ನಾಟಕದಲ್ಲಿ ಸಾಮಾನ್ಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದುರ್ಬಲವಾದ ವಾಯುಭಾರ ಕುಸಿತವು ಆಗ್ನೇಯ ಉತ್ತರ ಪ್ರದೇಶದಿಂದ ಕರ್ನಾಟಕದ ಉತ್ತರ ಒಳನಾಡಿನವರೆಗೆ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರಕ್ಕೆ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಮುಂದಿನ ದಿನಗಳ ಅವಧಿಯಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳು ಇರುವುದಿಲ್ಲ. ಇನ್ನು ರಾಜ್ಯಾದ್ಯಂತ ಕನಿಷ್ಠ ತಾಪಮಾನದಲ್ಲೂ ದೊಡ್ಡ ಬದಲಾವಣೆ ಆಗಿಲ್ಲ ಎಂದು ಐಎಂಡಿ ಹೇಳಿದೆ. ಈ ಬೇಸಿಗೆಯಲ್ಲಿ ತಾಪಮಾನ ಎಷ್ಟರ ಮಟ್ಟಿಗೆ ಏರಿಕೆಯಾಗುತ್ತದೆ ಎಂಬುದು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಸ್ಪಷ್ಟವಾಗಲಿದೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌‍ ಮೀರಬಹುದು. ಒಂದೆರಡು ಡಿಗ್ರಿ ಹೆಚ್ಚಳವಾದರೂ ಆ ಪ್ರದೇಶಗಳಲ್ಲಿ ತೀವ್ರ ಬಿಸಿಲು ಅನುಭವವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರಾವಳಿ ಕರ್ನಾಟಕದ ಅನೇಕ ಸ್ಥಳಗಳಲ್ಲಿ, ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (1.6 ಸೆ. ಯಿಂದ 8.0) ಹೆಚ್ಚು, ಉತ್ತರ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (3.1 ಸೆ ಇಂದ 5.0) ಹೆಚ್ಚು ಇರಲಿದೆ. ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣ ಮುಂದುವರಿದಿದೆ.

ಇನ್ನು ಬೀದರ್‌, ವಿಜಯಪುರ, ಧಾರವಾಡ, ಬೆಳಗಾವಿ ವಿಮಾನ ನಿಲ್ದಾಣ, ಗದಗ, ಹಾವೇರಿ, ರಾಯಚೂರು ಮತ್ತು ದಾವಣಗೆರೆ, ಬೆಂಗಳೂರು ನಗರ, ಮಂಡ್ಯ, ಶಿವಮೊಗ್ಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 14.0-18.0 ಡಿಗ್ರಿ ವ್ಯಾಪ್ತಿಯಲ್ಲಿದೆ. ಹಾಸನದಲ್ಲಿ 12.9 ಸೆ ಮತ್ತು ಚಿಂತಾಮಣಿಯಲ್ಲಿ 12.2 ಡಿಗ್ರಿ ಸೆಲ್ಸಿಯಸ್‌‍ ದಾಖಲಾಗಿದೆ. ಉತ್ತರ ಒಳನಾಡಿನ ಕೊಪ್ಪಳ, ಕಲಬುರಗಿ ಮತ್ತು ಚಿತ್ರದುರ್ಗ ಭಾಗದಲ್ಲಿ 18.1-20 ಸೆ ಇದೆ. ಕರಾವಳಿ ಕರ್ನಾಟಕದ ಹೊನ್ನಾವರ, ಕಾರವಾರ, ಮಂಗಳೂರು ವಿಮಾನ ನಿಲ್ದಾಣ ಮತ್ತು ಶಕ್ತಿನಗರ ಪ್ರದೇಶದಲ್ಲಿ 20.1-23.9 ಡಿ.ಸೆ. ಮುಂದುವರಿದಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದ ಸಮತಟ್ಟಾದ ಪ್ರದೇಶ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‌‍ ದಾಖಲಾಗಿದೆ.ಬೆಂಗಳೂರಿನಲ್ಲಿ ಮುಂದಿನ 48 ಗಂಟೆಯ ಅವಧಿಯಲ್ಲಿ ಪ್ರಮುಖವಾಗಿ ಶುಭ್ರ ಆಕಾಶ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಬೀಳುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 17 ಡಿಗ್ರಿ ಸೆಲ್ಸಿಯಸ್‌‍ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ತುಂಗಭದ್ರಾ ಜಲಾಶಯ ಹೊರತುಪಡಿಸಿ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಆದರೆ ಬೋರ್‌ವೆಲ್‌ ಅವಲಂಬಿತ ಪ್ರದೇಶಗಳು ಮತ್ತು ಈಗಲೇ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ತೊಂದರೆ ಹೆಚ್ಚಾಗಬಹುದು ಎಂದು ತಜ್ಞರು ಸೂಚಿಸಿದ್ದಾರೆ.

ಚಳಿ ಕಡಿಮೆಯಾಗುತ್ತಿರುವುದರಿಂದ ಬೇಸಿಗೆಯ ಆರಂಭವೇ ಈಗ ಗೋಚರಿಸುತ್ತಿದೆ. ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಸೂರ್ಯನ ಬೆಳಕಿನಲ್ಲಿ ಹೆಚ್ಚು ಸಮಯ ಕಳೆಯದಿರಿ, ಸಾಕಷ್ಟು ನೀರು ಕುಡಿಯಿರಿ ಮತ್ತು ಹಗುರ ಬಟ್ಟೆ ಧರಿಸಿ ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.

RELATED ARTICLES

Latest News