ಹಾಸನ,ಜ.29-ಮನೆ ಕೆಲಸದ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸಿನಿಂದಾಗಿ ಇಂದು ಬೆಳಗಿನ ಜಾವ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ನಗರದಲ್ಲಿ ನಡೆದಿದೆ.ಕುವೆಂಪುನಗರ ನಿವಾಸಿ ಆನಂದ(47) ಕೊಲೆಯಾದ ವ್ಯಕ್ತಿ.
ಆನಂದ್ ಅವರ ತಂದೆ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸುಮಾರು ಆರು ತಿಂಗಳ ಹಿಂದೆ ನಿಧನರಾಗಿದ್ದಾರೆ. ಇವರಿಗೆ ಮೂರು ಮಂದಿ ಮಕ್ಕಳು. ಮೂವರಿಗೂ ವಿವಾಹವಾಗಿದೆ.
ಹಿರಿಯ ಸಹೋದರರಾದ ಆನಂದ ಡಿ.ಎಸ್. ಹಾಗೂ ಶ್ರೀನಿವಾಸ್ ಡಿ.ಎಸ್. ಬೆಂಗಳೂರಿನಲ್ಲಿ ವಾಸವಾಗಿದ್ದರು. ಆನಂದ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ನಾಲ್ಕು ವರ್ಷಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿಕೊಂಡು ವಾಪಸ್ ಹಾಸನಕ್ಕೆ ಬಂದು ಸಹೋದರ ಹೇಮಂತ್ ಮನೆಯಲ್ಲೇ ನೆಲೆಸಿದ್ದನು.
ನಗರದ ಪವನಪುತ್ರ ಕಲ್ಯಾಣ ಮಂಟಪದಲ್ಲಿ ಆನಂದ್ ವ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು.
ಸಹೋದರ ಹೇಮಂತ್ ಮನೆಗೆ ಕಳೆದ ಒಂದೂವರೆ ವರ್ಷಗಳಿಂದ ಸುಮಾ ಎಂಬ ಮಹಿಳೆ ಮನೆ ಕೆಲಸಕ್ಕೆ ಬರುತ್ತಿದ್ದು, ಈ ವೇಳೆ ಆನಂದ ಹಾಗೂ ಸುಮಾ ಪರಸ್ಪರ ಮಾತನಾಡುತ್ತಿದ್ದರು ಎನ್ನಲಾಗಿದೆ.
ಈ ವಿಷಯದಿಂದ ಅಸಮಾಧಾನಗೊಂಡ ಸುಮಾಳೊಂದಿಗೆ ಇದ್ದ ಧರ್ಮೇಂದ್ರ ಎಂಬಾತ, ಮನೆಯ ಬಳಿ ಹೋಗಿ ಆನಂದನೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಆಗ ಸಹೋದರ ಹೇಮಂತ್ ಮಧ್ಯಸ್ಥಿಕೆ ವಹಿಸಿ ಗಲಾಟೆಯನ್ನು ಬಿಡಿಸಿ ಕಳುಹಿಸಿದ್ದರು.
ಆದರೆ ಇವರಿಬ್ಬರ ವೈಮನಸ್ಸು ಶಮನವಾಗಿಲ್ಲ. ಇಂದು ಬೆಳಗಿನ ಜಾವ ಸುಮಾರು 1.40ರ ವೇಳೆಗೆ, ಆನಂದ ಫೋನ್‌ನಲ್ಲಿ ಜೋರಾಗಿ ಕೂಗಾಡುತ್ತಾ ಲೋ ಧರ್ಮ, ಎಲ್ಲಿ ಬರಬೇಕೋ ಬಾ ಎಂದು ಹೇಳಿಕೊಂಡು ಬಳಿಕ ಮನೆ ಹೊರಗೆ ತೆರಳಿದ್ದಾನೆ.
ಬೆಳಗಿನ ಜಾವ 2.45ರ ಸುಮಾರಿಗೆ, ಮನೆ ಕೆಲಸದ ಮಹಿಳೆ ಸುಮಾ ತನ್ನ ಮೊಬೈಲ್‌ನಿಂದ ಹೇಮಂತ್ ಅವರ ತಾಯಿಗೆ ಕರೆ ಮಾಡಿ, ನಗರದ ಕೆ.ಆರ್.ಪುರಂ 7ನೇ ಕ್ರಾಸ್‌ನ ಮಟನ್ ಅಂಗಡಿಯ ಎದುರು ಧರ್ಮೇಂದ್ರ ಎಂಬಾತ ನಿಮ ಮಗ ಆನಂದನಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾಳೆ.
ಗಾಯಗೊಂಡ ಆನಂದನನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದೂ ತಿಳಿಸಿದ್ದಾಳೆ.ಸುದ್ದಿ ತಿಳಿದು ಗಾಬರಿಯಾದ ಆನಂದ್ ಕುಟುಂಬದವರು ತಕ್ಷಣ ಸರ್ಕಾರಿ ಆಸ್ಪತ್ರೆ ಬಳಿ ಧಾವಿಸಿದಾಗ, ಆನಂದನ ಮೃತದೇಹ ಶವಾಗಾರದಲ್ಲಿರುವುದು ಕಂಡುಬಂದಿತು.
ಆನಂದನ ಹೊಟ್ಟೆ ಹಾಗೂ ಎದೆ ಭಾಗದಲ್ಲಿ ಮೂರ್ನಾಲ್ಕು ಕಡೆ ಚಾಕು ಇರಿತದ ಗಂಭೀರ ಗಾಯಗಳು ಕಂಡುಬಂದಿವೆ.
ಸುಮಾ ಹಾಗೂ ಆನಂದ ನಡುವಿನ ಸಂಪರ್ಕದ ವಿಚಾರದಿಂದಲೇ ಧರ್ಮೇಂದ್ರ ವೈಷಮ್ಯ ಹೊಂದಿ, ಆನಂದನನ್ನು ಕರೆಸಿ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಸಹೋದರ ಹೇಮಂತ್ ಅವರು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಬಡಾವಣೆ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
