ಬೆಂಗಳೂರು,ಜ.29- ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಅಚಲವಾದ ನಂಬಿಕೆ ಹೊಂದಿದ್ದೇನೆ ಎಂದು ಇಂಧ ಸಚಿವ ಕೆ.ಜೆ.ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರ ಹಸ್ತಕ್ಷೇಪದಿಂದ ಬೇಸತ್ತಿರುವ ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ವದಂತಿಗಳು ಹರಿದಾಡಿದ್ದವು.
ಈ ಬಗ್ಗೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ಕುಮಾರ್ ವಿಷಯ ಪ್ರಸ್ತಾಪಿಸಿ, ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಇದೆ. ಈ ಬಗ್ಗೆ ನಾನು ಟೀಕೆ ಮಾಡುತ್ತಿಲ್ಲ. ಸ್ಪಷ್ಟನೆ ಕೇಳುತ್ತಿದ್ದೇನೆ ಎಂದರು.
ಜಾರ್ಜ್ ಅವರು ಉತ್ತರ ನೀಡಿ ತಾವು ಸುದೀರ್ಘ ಕಾಲ ರಾಜಕೀಯದಲ್ಲಿದ್ದು, ಈ ಕ್ಷಣದವರೆಗೂ ವಿಧಾನಸಭೆಯಲ್ಲಿ ಕಲಾಪದಲ್ಲಿ ಭಾಗವಹಿಸಿದ್ದೇನೆ. ಪ್ರಶ್ನೋತ್ತರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ರಾಜೀನಾಮೆ ಕುರಿತು ಅನಗತ್ಯ ವದಂತಿಗಳು ಹಬ್ಬಿವೆ. ಅದೆಲ್ಲ ಸತ್ಯಕ್ಕೆ ದೂರವಾದ ವಿಚಾರಗಳು ಎಂದರು.
ಅನಗತ್ಯವಾಗಿ ಇಂಥ ವದಂತಿಗಳನ್ನು ಹರಡುತ್ತಿದ್ದಾರೆ. ಇದು ಸರಿಯಲ್ಲ. ನಾನು ರಾಜೀನಾಮೆ ನೀಡಿಲ್ಲ ಮುಖ್ಯಮಂತ್ರಿಯವರ ನಾಯಕತ್ವದಲ್ಲಿ ವಿಶ್ವಾಸವಿದ್ದು, ಅವರಿಗೆ ಬೆಂಬಲವಾಗಿದ್ದೇನೆ ಎಂದರು.
