ಬೆಂಗಳೂರು, ಜ.29- ನಾವು ಯಾರದೇ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ. ಪರ ಮೇಶ್ವರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರ ಅವಶ್ಯಕತೆಯೂ ನಮಗಿಲ್ಲ. ಬಿಜೆಪಿಯವರು ಆರೋಪ ಮಾಡುವುದಕ್ಕೂ, ಫೋನ್ ಟ್ಯಾಪ್ ಮಾಡುವುದಕ್ಕೂ ಸಂಬಂಧ ವಿದೆಯೇ?, ನಿತ್ಯ ಅವರು ನೂರಾರು ಆರೋಪಗಳನ್ನು ಮಾಡುತ್ತಾರೆ. ಅದಕ್ಕೆಲ್ಲಾ ನಾವು ಏನು ಹೇಳಬೇಕು? ಆರೋಪ ಮಾಡಿದರು ಎಂದಾಕ್ಷಣ ನಾವು ಅವರ ಖಾಸಗಿ ವಿಚಾರಗಳಿಗೆ ಹೋಗುತ್ತೇವೆ ಎಂಬುದು ಶುದ್ಧ ತಪ್ಪು ಎಂದರು.
ಬಿಜೆಪಿಯವರು ಏನು ಮಾಡುತ್ತಿದ್ದರೋ ಅದನ್ನು ನಾವು ಮಾಡುತ್ತಿರುವುದಾಗಿ ಹೇಳುತ್ತಿದ್ದಾರಷ್ಟೇ ಎಂದು ತಿರುಗೇಟು ನೀಡಿದರು.ಜಾರಿಯಾಗದ ಕಾಯ್ದೆಯಡಿ ನೋಟೀಸ್ ನೀಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನಿನ್ನೆ ಮೇಲನೆಯಲ್ಲೂ ಪ್ರಸ್ತಾಪವಾಗಿದ್ದು, ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಬಿಎನ್‌ಎಸ್ ವಿಚಾರವಾಗಿ ಅಧಿಕಾರಿಗಳಿಗೆ ನಿತ್ಯ ಪಾಠ ಮಾಡುತ್ತಲೇ ಇದ್ದೇವೆ. ಒಬ್ಬ ಇನ್‌ಸ್ಪೆಕ್ಟರ್ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ತಪ್ಪು ಆದಾಗ ಸರಿಪಡಿಸುವ ಕೆಲಸವನ್ನು ನಾವು ಮಾಡಿಯೇ ಮಾಡುತ್ತೇವೆ ಎಂದರು.
ಅಧಿವೇಶನ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಸದನದ ಕಾರ್ಯಕಲಾಪಗಳ ಸಭೆಯಲ್ಲಿ ತೀರ್ಮಾನವಾಗುತ್ತದೆ. ಅಲ್ಲೇ ಈ ವಿಚಾರ ನಿರ್ಧಾರವಾಗಬೇಕು. ನಾನಾಗಲೀ ಮುಖ್ಯಮಂತ್ರಿಯಾಗಲೀ ತೀರ್ಮಾನ ಮಾಡಲು ಬರುವುದಿಲ್ಲ ಎಂದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅವರ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಎಲ್ಲವನ್ನೂ ಮುಖ್ಯಮಂತ್ರಿ ಗಮನಿಸಿದ್ದು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಪಿಎಸ್‌ಐ ವರ್ಗಾವಣೆ ಮಿತಿಯನ್ನು 2 ವರ್ಷ ಮಾಡಿದ್ದೇವೆ. ಈ ಹಿಂದೆ 1 ವರ್ಷವಿತ್ತು ಎಂದ ಅವರು, ಅಬಕಾರಿ ಸಚಿವರ ರಕ್ಷಣೆಗೆ ಸಿಎಲ್‌ಪಿ ನಿಂತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ಅಧಿಕಾರಿ ಮಾತನಾಡಿದರೆ ಅದಕ್ಕೆ ಮಂತ್ರಿಗಳ ಮೇಲೆ ಆಪಾದನೆ ಮಾಡುವುದನ್ನು ಖಂಡಿಸಿದ್ದೇವೆ. ಅವರ ಆರೋಪವನ್ನು ಸಾಬೀತು ಮಾಡಲಿ ಎಂದರು.
ಜೆಡಿಎಸ್ ಶಾಸಕಿ ಕರೆಮ ಜಿ ನಾಯಕ ಅವರಿಗೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸ್ಪಷ್ಟವಾದ ಉತ್ತರ ನೀಡಲಾಗಿದೆ. ಆ ರೀತಿ ಏನಾದರೂ ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಅವರಿಗೆ ರಕ್ಷಣೆ ಕೊಡುವುದಾಗಿ ಸದನದಲ್ಲೇ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದರು.
