ಕಿಶಾ್ತ್ವರ್, ಜ.31- ಭಯೋತ್ಪಾದನೆ ತ್ಯಜಿಸಿ ಮನೆಗೆ ಬಾ ಬಂದು ನನ್ನ ಶವಪೆಟ್ಟಿಗೆಗೆ ಹೆಗಲು ಕೊಡು ಎಂಬ ತಾಯಿಯ ಕಳಕಳಿಯ ಮನವಿಯನ್ನು ತಿರಸ್ಕರಿಸಿದ ಪಾಪಿ ಮಗನೊಬ್ಬ ಕೊನೆಗೂ ಉಗ್ರ ಲೋಕವನ್ನು ಆರಿಸಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹದಿನೈದು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಇಲ್ಲಿನ ರಿಯಾಜ್ ಅಹಮದ್ ಎಂಬಾತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿಕೊಂಡು ದೇಶದ್ರೋಹಿಯಾಗಿ ಮಾರ್ಪಟ್ಟಿದ್ದ ಆತನ ತಲೆಗೆ ಭಾರತೀಯ ಸೇನೆ 10 ಲಕ್ಷ ರೂ.ಗಳ ಬೆಲೆ ಕಟ್ಟಿತ್ತು.
ರಿಯಾಜ್ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿತ್ತು. ಕೊನೆಗಾಲದಲ್ಲಿ ಹಾಸಿಗೆ ಹಿಡಿದ ಆತನ ತಾಯಿ ಜನಬೇಗಂ ಅವರು ತನ್ನು ಕರುಳ ಕುಡಿಗೆ ಹಿಂತಿರುಗಿ ಬಾ, ನನ್ನನ್ನು ನೋಡಿಕೊ, ನಾನು ಸತ್ತರೆ ನನ್ನ ಶವಪೆಟ್ಟಿಗೆಗೆ ಹೆಗಲು ಕೊಡು ಎಂದು ಬೇಡಿಕೊಂಡಿದ್ದರು.
ತಿಂಗಳ ಹಿಂದೆ, ಬೇಗಂ ತಮ್ಮ ಮಗನಿಗೆ ಇದು ಎಂತಹ ಜಿಹಾದ್, ಅಲ್ಲಿ ಹೆತ್ತವರನ್ನು ತ್ಯಜಿಸಲಾಗುತ್ತದೆ ಭಯೋತ್ಪಾದನೆ ಬೇಡ ಎಲ್ಲವನ್ನೂ ಬಿಟ್ಟು ಬಾ ಎಂದು ಹೃದಯ ವಿದ್ರಾವಕ ಮನವಿ ಮಾಡಿದ್ದರು.ಅವರ ಪತಿ ಮೊಹಮ್ಮದ್ ರಂಜಾನ್ ಕೂಡ
ತಮ್ಮ ಮಗ ಹಿಂಸೆಯ ಮಾರ್ಗವನ್ನು ತ್ಯಜಿಸಬೇಕೆಂದು ಒತ್ತಾಯಿಸಿದ್ದರು.
ಹಾಸಿಗೆ ಹಿಡಿದಿದ್ದ ತಾಯಿ ತನ್ನ ಮಗನ ಬರುವಿಕೆಗೆ ಕಾಯುತ್ತಲೆ ಪ್ರಾಣ ಬಿಟ್ಟಿದ್ದರು. ಆದರೂ ಆ ಪಾಪಿ ಮಗನ ಹೃದಯ ಕರಗಲೇ ಇಲ್ಲ. ತಾಯಿ ಮಾತಿಗೆ ಬೆಲೆ ಕೊಡದ ಆತ ಆಕೆಯ ಅಂತ್ಯಕ್ರಿಯೆಗೂ ಬರಲೇ ಇಲ್ಲ. ಅವರ ಅಂತಹ ನಿರ್ಧಾರ ಉಗ್ರರು ತನ್ನವರಿಗೆ ಯಾವ ರೀತಿಯ ಬ್ರೈನ್ ವಾಷ್ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಂತಿದೆ.
ಕರುಳ ಕೂಗನ್ನು ಅಳಿಸಿಹಾಕುವಂತೆ ಯುವಕರ ಬ್ರೈನ್ ವಾಷ್ ಮಾಡಲಾಗುತ್ತಿದೆ. ನಾವು ಎರಡು ತಲೆಮಾರುಗಳನ್ನು ಕಳೆದುಕೊಂಡಿದ್ದೇವೆ ಮತ್ತು ಈಗ ಅವರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಯುವ ಜನಾಂಗಕ್ಕೆ ಉಪದೇಶಿಸುವ ಮತ್ತು ಮೆದುಳು ತೊಳೆಯುವ ಮೂಲಕ ನಮ್ಮ ಮೂರನೇ ತಲೆಮಾರನ್ನು ಉಗ್ರ ಕೃತ್ಯಗಳತ್ತ ಪ್ರಚೋದಿಸುತ್ತಿದ್ದಾರೆ ಎಂದು ಭದ್ರತಾ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
