Saturday, April 18, 2026
Homeರಾಜ್ಯರಾಜಕಾರಣದಲ್ಲಿ ಪ್ರಭಾವಿಗಳಿಗೆ ತಲೆನೋವಾದ AI ತಂತ್ರಜ್ಞಾನ

ರಾಜಕಾರಣದಲ್ಲಿ ಪ್ರಭಾವಿಗಳಿಗೆ ತಲೆನೋವಾದ AI ತಂತ್ರಜ್ಞಾನ

AI technology is a headache for influential people in politics

ಬೆಂಗಳೂರು,ಫೆ.2- ಆಧುನಿಕ ತಂತ್ರಜ್ಞಾನ ಯುಗದಲ್ಲಿ ದಿನೇ ದಿನೇ ಹೊಸ ಸವಾಲುಗಳು ಸೃಷ್ಟಿಯಾಗುತ್ತಿದ್ದು, ಕೃತಕಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗುತ್ತಿರುವ ಕಿರುಚಿತ್ರಗಳು ರಾಜಕಾರಣದಲ್ಲಿ ಪ್ರಭಾವಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿವೆ.

ಪ್ರಭಾವಿ ನಾಯಕರುಗಳ ಮಾದರಿಯಲ್ಲೇ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದ್ದು, ವಿರೋಧಿಗಳು ತಮ ಎದುರಾಳಿಗಳ ತೇಜೋವಧೆ ಮಾಡಲು ಕೃತಕಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ತಯಾರಿಸುವ ವಿಡಿಯೋಗಳನ್ನು ಬಳಕೆ ಮಾಡುತ್ತಿದ್ದಾರೆ.

ಆರಂಭದಲ್ಲಿ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಮಾದರಿಯ ಕೃತಕಬುದ್ದಿಮತ್ತೆಯ ಕಿರುಚಿತ್ರಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಆ ಕಿರುಚಿತ್ರದಲ್ಲಿ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿನ ಗೊಂದಲಗಳ ಬಗ್ಗೆ ನಾನಾ ರೀತಿಯ ವ್ಯಾಖ್ಯಾನ ಮಾಡಲಾಗಿತ್ತು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಾವಿಬ್ಬರೂ ಜಂಟಿಯಾಗಿ ರಾಜ್ಯವನ್ನು ಲೂಟಿ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಮಾತನಾಡಿಕೊಂಡಂತೆಯೂ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಹರಿಯಬಿಡಲಾಗಿತ್ತು.

ಇತ್ತೀಚೆಗೆ ರಾಜ್ಯಪಾಲರ ಭಾಷಣಕ್ಕೆ ಸಂಬಂಧಟ್ಟಂತೆ ಉಂಟಾದ ಗೊಂದಲಕ್ಕೆ ಕೌಂಟರ್‌ ಎಂಬಂತೆ ಯುವ ಕಾಂಗ್ರೆಸ್‌‍ ವತಿಯಿಂದ ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಹೋಲುವ ನಕಲಿ ವಿಡಿಯೋಗಳನ್ನು ತಯಾರಿಸಿ ಯುವ ಕಾಂಗ್ರೆಸ್‌‍ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು.

ಇತ್ತೀಚೆಗೆ ಬಳ್ಳಾರಿ ಗಲಭೆಗೆ ಸಂಬಂಧಪಟ್ಟಂತೆ ನಾರಾ ಭರತ ರೆಡ್ಡಿ ಬೆಂಬಲಿಗರ ಹೆಸರಿನಲ್ಲಿ ಒಂದಿಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಹೋಲುವ ವಿಡಿಯೋಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ರಾಜಕಾರಣದಲ್ಲಿ ತಮಗೆ ಇಷ್ಟವಾಗದೇ ಇರುವವರನ್ನು ತೇಜೋವಧೆ ಮಾಡಲು ಅಥವಾ ತಮ ಅಭಿಪ್ರಾಯವನ್ನು ಬೇರೆಯವರ ಬಾಯಲ್ಲಿ ಹೇಳಿಸಿ ವಿಡಂಬಣೆ ಮಾಡಲು ಕೃತಕಬುದ್ದಿಮತ್ತೆಯ ಈ ವಿಡಿಯೋಗಳನ್ನು ಬಳಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಇದು ವಿಪರೀತಕ್ಕೂ ತಲುಪಿರುವ ಉದಾಹರಣೆಗಳಿವೆ.

ವಿಡಿಯೋದಲ್ಲಿ ನೈಜ ವ್ಯಕ್ತಿಗಳ ಚಹರೆ ಮತ್ತು ದೈಹಿಕ ಸ್ವರೂಪವನ್ನು ಚಿತ್ರಿಸಲಾಗುತ್ತದೆ. ಅಮಾಯಕರಿಗೆ ಇದು ಕೃತಕ ವಿಡಿಯೋ ಎಂದು ಅರ್ಥವಾಗುವ ಸಾಧ್ಯತೆಗಳು ಕಡಿಮೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಹೋಲುವ ವಿಡಿಯೋಗಳನ್ನು ತಯಾರಿಸಿ ನಾವಿಬ್ಬರು ಸೇರಿ ಭ್ರಷ್ಟಾಚಾರ ಮಾಡುತ್ತೇವೆ ಎಂಬಂತೆ ಚಿತ್ರಿಸುವುದು ಜನಸಾಮಾನ್ಯರನ್ನು ಸುಲಭವಾಗಿ ದಾರಿ ತಪ್ಪಿಸಲು ಅವಕಾಶ ಮಾಡಿಕೊಡುತ್ತಿದೆ.

ಇನ್ನು ಕೆಲವು ಸಂದರ್ಭಗಳಲ್ಲಿ ಯಾವೆಲ್ಲ ರೀತಿ ವಿಪರೀತ್ಯಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂಬುದನ್ನು ಊಹೆ ಮಾಡಿದರೆ ಸಂಭವನೀಯ ಅಪಾಯಗಳ ಆತಂಕ ಮನೆ ಮಾಡುತ್ತದೆ.
ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಸಾಕಷ್ಟು ಕಾನೂನುಗಳಿವೆ. ಆದರೆ ಕೃತಕಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿ ಸೃಷ್ಟಿಸುತ್ತಿರುವ ಈ ವಿಡಿಯೋಗಳು ಅಪರಾಧಗಳ ವ್ಯಾಪ್ತಿಗೆ ಒಳಪಡದಂತೆ ಸೃಷ್ಟಿಕರ್ತರು ನಾಜೂಕತನ ಅನುಸರಿಸುತ್ತಿದ್ದಾರೆ.

ಜನಸಾಮಾನ್ಯರಲ್ಲಿ ಈ ರೀತಿಯ ವಿಡಿಯೋಗಳು ಭಾರೀ ಪರಿಣಾಮ ಬೀರುತ್ತಿದೆ. ಸಮಾಧಾನಕರ ವಿಚಾರ ಎಂದರೆ ಸದ್ಯಕ್ಕೆ ಇದು ರಾಜಕಾರಣದ ಹಂತಕ್ಕಷ್ಟೇ ಸೀಮಿತವಾದಂತಿದೆ. ಆದರೆ ಮುಂದುವರೆದು ವ್ಯಕ್ತಿಗತ ವಿಚಾರಗಳಿಗೂ ದುರ್ಬಳಕೆಯಾದರೆ ಅದರ ಅನಾಹುತ ಮತ್ತಷ್ಟು ಅಪಾಯಕಾರಿ ಆಗುವ ಸಾಧ್ಯತೆ ಇದೆ. ಕಡಿಮೆ ವೆಚ್ಚದಲ್ಲೇ ಎಐ ತಂತ್ರಜ್ಞಾನ ಬಳಕೆಗೆ ಲಭ್ಯವಾಗುತ್ತಿದೆ. ನಿರ್ಧಿಷ್ಟವಾಗಿ ಕಡಿವಾಣ ಹಾಕದೇ ಇದ್ದರೆ ಮುಂದಿನ ದಿನಗಳಲ್ಲಿ ಭಾರೀ ಅನಾಹುತವಾಗುವ ಸಾಧ್ಯತೆಯಂತೂ ಇದೆ.

RELATED ARTICLES

Latest News