Thursday, April 16, 2026
Homeರಾಜ್ಯ16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ : ರಾಜ್ಯ ಸರ್ಕಾರ ಗಂಭೀರ ಚಿಂತನೆ

16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ : ರಾಜ್ಯ ಸರ್ಕಾರ ಗಂಭೀರ ಚಿಂತನೆ

Ban on social media for children under 16

ಬೆಂಗಳೂರು,ಫೆ.2- ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ 16 ವರ್ಷದ ಒಳಗಿನ ಮಕ್ಕಳು, ಸಾಮಾಜಿಕ ಜಾಲತಾಣ (ಸೋಶಿಯಲ್‌ ಮೀಡಿಯಾ) ಬಳಸುವುದನ್ನು ನಿಷೇಧ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಒಂದು ಕಡೆ ಕೇಂದ್ರ ಸರ್ಕಾರವು 16 ವರ್ಷಗಳ ವಯೋಮಿತಿಯ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ನಿಷೇಧ ಮಾಡಲು ಸಂಸತ್ತಿನಲ್ಲಿ ಕಾಯ್ದೆ ಜಾರಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಮತ್ತೊಂದು ಕಡೆ ಆಂಧ್ರಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ನಿಷೇಧಿಸಲು ಹೊಸ ಐಟಿ ಕಾಯ್ದೆ ಜಾರಿಗೊಳಿಸುವ ಬಗ್ಗೆ ಚಿಂತನ ಮಂಥನ ನಡೆಸಲಾಗಿದೆ.

ಎನ್‌ಡಿಎ ಪ್ರಮುಖ ಮಿತ್ರಪಕ್ಷ ಟಿಡಿಪಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸುವುದು ಅಥವಾ ನಿರ್ವಹಿಸುವುದನ್ನು ನಿಷೇಧಿಸುವ ರಾಷ್ಟ್ರವ್ಯಾಪಿ ಮಸೂದೆಯನ್ನು ಪ್ರಸ್ತಾಪಿಸಿದೆ.

ಪ್ರಸ್ತಾವಿತ ಶಾಸನವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಯಸ್ಸಿನ ಪರಿಶೀಲನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತದೆ, ರಾಜ್ಯಗಳು ಆಸ್ಟ್ರೇಲಿಯಾದ ಇತ್ತೀಚಿನ ಇದೇ ರೀತಿಯ ಕ್ರಮಗಳನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತವೆ.

ಈ ಬೆಳವಣಿಗೆಗಳ ನಡುವೆ ಕರ್ನಾಟಕದಲ್ಲಿ ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲ ಬಳಕೆಗೆ ನಿರ್ಬಂಧ ವಿಧಿಸುವ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರು ಈಗಾಗಲೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದರೆ ಹೊಸ ಕಾಯ್ದೆ ಶೀಘ್ರದಲ್ಲಿ ಜಾರಿಗೆ ಬರಲಿದೆ.

ಸಾಮಾಜಿಕ ಜಾಲತಾಣ ಬಳಕೆ ಮಾಡುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಕಡೆ ವ್ಯಾಸಂಗದ ಕಡೆ ಗಮನ ನೀಡದಿರುವುದು, ಏಕಾಗ್ರತೆ ಇಲ್ಲದಿರುವುದು ಫಲಿತಾಂಶದ ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾನಸಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಪದೇ ಪದೇ ಮೊಬೈಲ್‌ ಬಳಕೆ ಮಾಡುತ್ತಿರುವುದು ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಓದಿನ ಕಡೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌, ಫೇಸ್‌‍ಬುಕ್‌ ಸೇರಿದಂತೆ ಹಲವು ವೇದಿಕೆಗಳನ್ನು ಬಳಸುತ್ತಿರುವುದರಿಂದ ಏಕಾಗ್ರತೆ ಕಡಿಮೆಯಾಗಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಮಾನಸಿಕ ತಜ್ಞರು ಆತಂಕ ಹೊರ ಹಾಕಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ.

ಕೇಂದ್ರ ಸರ್ಕಾರವು ಇದೇ ಮಾದರಿಯನ್ನು ಮುಂದಿಟ್ಟುಕೊಂಡು 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸಿದಂತೆ ನಿರ್ಬಂಧ ವಿಧಿಸುವ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಇದು ಗಂಭೀರವಾದ ಸಮಸ್ಯೆಯಾಗಿದೆ. ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಚರ್ಚೆ ನಡೆಸುತ್ತಿದೆ. ನಾವು ರಾಜ್ಯದಲ್ಲೂ ಜವಾಬ್ದಾರಿಯುತ ಬಳಕೆದಾರರು ಎಐ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಏನು ಮಾಡಬೇಕು ಎಂದು ಈಗಾಗಲೇ ಸಮಾಲೋಚನೆ ಮಾಡುತ್ತಿದ್ದೇವೆ. ಫಿನ್‌ಲ್ಯಾಂಡ್‌ ಕ್ರಮ ತೆಗೆದುಕೊಂಡಿದೆ. ಇಂಗ್ಲೆಂಡ್‌ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ 16 ವರ್ಷದವರೆಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ಹೇರಿದೆ. ನಾವೂ ರಾಜ್ಯದಲ್ಲಿ ಎಐ ವಿಚಾರವಾಗಿ ಹಾಗೂ ಸೋಷಿಯಲ್‌ ಮೀಡಿಯಾದ ಮೇಲೆ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ 16 ವರ್ಷದವರೆಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಿದೆ. ಇದರಿಂದ ಅಪಾಯಕಾರಿ ಪರಿಸ್ಥಿತಿ ಉದ್ಭವವಾಗಿದೆ. ಕೇಂದ್ರ ಸರ್ಕಾರ ನಿನ್ನೆ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲೂ ಸಾಮಾಜಿಕ ಜಾಲತಾಣಗಳಿಗೆ ಮಕ್ಕಳ ಎಕ್‌್ಸಪೋಜರ್‌ ಹಾಗೂ ಅದರಿಂದ ಮಕ್ಕಳನ್ನು ಕಳೆದುಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ವಯಸ್ಸಿಗೆ ಬರುವ ಮುನ್ನವೇ ಮಕ್ಕಳು ಫೋನ್‌ಗಳನ್ನು ನೋಡುತ್ತಿದ್ದಾರೆ. ಇದು ಗಂಭೀರವಾದ ವಿಚಾರ. ಗೋವಾದಲ್ಲೂ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಡ ಕೇಳಿಬರುತ್ತಿದೆ.

ಸರ್ಕಾರಿ ನೌಕರರಿಗೂ ಕಡಿವಾಣ :
ರಾಜ್ಯ ಸರ್ಕಾರಿ ನೌಕರರು ಪದೇ ಪದೇ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಾಕುತ್ತಿರುವುದು ಆಡಳಿತ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ವಿವಾದ ಮತ್ತು ಮುಜುಗರಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಹೊಸ ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಇದೆ.

ಫೇಸ್‌‍ಬುಕ್‌, ಎಕ್ಸ್ , ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಟೆಲಿಗ್ರಾಮ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರು ಹೇಗೆ ವರ್ತಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಿದೆ. ಸರ್ಕಾರಿ ನೌಕರರು ಪ್ರಚೋದನಕಾರಿ ಪೋಸ್ಟ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News