ಬೆಂಗಳೂರು, ಫೆ. 3- ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಗ್ರೌಂಡ್ +3 ಮತ್ತು ಹೆಚ್ಚಿನ ಅಂತಸ್ತುಗಳ ಕಟ್ಟಡಗಳ ನೆಲಮಹಡಿಯಲ್ಲಿ ಕಡ್ಡಾಯವಾಗಿ ತ್ಯಾಜ್ಯ ಸಂಗ್ರಹಣಾ ಬಿನ್‌ಗಳನ್ನು ಅಳವಡಿಕೆಗೆ ಜಿಬಿಎ ಅದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜಾರಿಗೊಳಿಸಿರುವ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ಅನ್ವಯ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪ್ರಸ್ತುತ ಸುಮಾರು 800ಕ್ಕೂ ಬ್ಲಾಕ್ ಸ್ವಾಟ್‌ಗಳನ್ನು ಗುರುತಿಸಲಾಗಿದೆ. ಪರಿವೀಕ್ಷಣೆಯ ವೇಳೆಯಲ್ಲಿ ಕೆಲವು ಬಹುಮಹಡಿ ಕಟ್ಟಡಗಳಲಿ ಕೆಲವು ನಿವಾಸಿಗಳು ತ್ಯಾಜ್ಯವನ್ನು ವಿಲೇವಾರಿದಾರರಿಗೆ ನೀಡದೆ ಇರುವುದು ಕಂಡು ಬಂದಿರುತ್ತದೆ. ಇದರಿಂದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲಾಗದೆ, ತ್ಯಾಜ್ಯವನ್ನು ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಎಸೆಯುತ್ತಿರುವುದರಿಂದ ನಗರದಲ್ಲಿ ಕಪ್ಪು ಚುಕ್ಕೆಗಳು ಸೃಷ್ಟಿಯಾಗುತ್ತಿದ್ದು ಇದು ಸಾರ್ವಜನಿಕರ ಆರೋಗ್ಯ ಹಾಗೂ ನಗರದ ಸೌಂದರೀಕರಣಕ್ಕೆ ಧಕ್ಕೆ ಉಂಟುಮಾಡುತ್ತಿರುತ್ತದೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ-4 ರ ಪ್ರಕಾರ ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಗೃಹಬಳಕೆಯ ಅಪಾಯಕಾರಿ ತ್ಯಾಜ್ಯವನ್ನಾಗಿ ಪ್ರತ್ಯೇಕಿಸುವುದು ಹಾಗೂ ಅದನ್ನು ಪ್ರತ್ಯೇಕ ಬಣ್ಣದ ತ್ಯಾಜ್ಯದ ಬಿನ್‌ಗಳಲ್ಲಿ ಸಂಗ್ರಹಿಸಿಡುವುದು ಕಡ್ಡಾಯವಾಗಿದೆ.
ಜಿ.ಬಿ.ಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮನೆ ಮನೆಯಿಂದ ಕಸವನ್ನು ಸಮರ್ಪಕವಾಗಿ ಸಂಗ್ರಹಿಸಲು ಗ್ರೌಂಡ್ +03ಹಾಗೂ ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ಹೊಂದಿರುವ ಎಲ್ಲಾ ವಸತಿ ಗೃಹ, ಸಮುಚ್ಚಯಗಳು ಹಾಗೂ ವಾಣಿಜ್ಯ ಆಸ್ತಿ ಮಾಲೀಕರು, ತಮ್ಮ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ನೆಲಮಹಡಿಯಲ್ಲಿ ಪ್ರತ್ಯೇಕವಾಗಿ ಎರಡು ತ್ಯಾಜ್ಯದ ಬಿನ್ ಗಳಲ್ಲಿ ಶೇಖರಿಸಬೇಕು.
ನೆಲಮಹಡಿಯಲ್ಲಿ ಈ ಬಿನ್‌ಗಳನ್ನು ಸ್ಥಾಪಿಸುವುದರಿಂದ ಸ್ವಚ್ಛತಾ ಸಿಬ್ಬಂದಿಗೆ ತ್ಯಾಜ್ಯ ಸಂಗ್ರಹಣೆ ಸುಗಮವಾಗುತ್ತದೆ ಮತ್ತು ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಖಚಿತವಾಗುತ್ತದೆ. ದೀರ್ಘಾವಧಿಯಲ್ಲಿ ಈ ಕ್ರಮವು ನಗರದಲ್ಲಿನ ಬ್ಲಾಕ್ ಸ್ಪಾಟ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡಿ, ಸಂಪೂರ್ಣ ನಿರ್ಮೂಲನೆಗೆ ಸಹಕಾರಿಯಾಗುತ್ತದೆ. ಒಂದು ವೇಳೆ ಡಸ್ಟ್ ಪಿನ್ ನಿರ್ವಹಣೆ ಮಾಡದೆ ಹೊದರೆ ಅಂತಹ ಕಟ್ಟಡಗಳಿಗೆ ನೋಟೀಸ್ ನೀಡಿ ದಂಡ ವಿಧಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಎಚ್ಚರಿಕೆ ನೀಡಿದ್ದಾರೆ.
