ಬೆಂಗಳೂರು, ಫೆ.10- ಅಧಿಕಾರ ಹಂಚಿಕೆಯ ಬಗ್ಗೆ ನಾನು ಮತ್ತು ಸಿದ್ದರಾಮಯ್ಯ ಮಾತನಾಡಿ ಕೊಂಡಿದ್ದೇವೆ. ಬೇರೆಯವರು ಅನಗತ್ಯವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಹಾನಿ ಮಾಡ ಬಾರದು ಎಂದು ಹೇಳುವ ಮೂಲಕ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಪರಾಕಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಮುಂದಿನ ಅವಧಿಗೂ ತಮ ತಂದೆಯೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ. ಹೈಕಮಾಂಡ್ ಈಗಾಗಲೇ ಸಂದೇಶ ರವಾನೆ ಮಾಡಿದೆ ಎಂದು ಹೇಳಿದ್ದರು.
ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಪರವಾಗಿ ಶಾಸಕರಾದ ಶಿವಗಂಗಾ ಬಸವರಾಜ್, ಇಕ್ಬಾಲ್ ಹುಸೇನ್ ಮತ್ತಿತರರು ಬ್ಯಾಟಿಂಗ್ ಮಾಡಿದ್ದರು. ಹೈಕಮಾಂಡ್ ನಾಯಕತ್ವದ ಗೊಂದಲವನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸಿದ್ದರು. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತಿತರರು ಈ ಬಗ್ಗೆ ಹೇಳಿಕೆ ನೀಡುತ್ತಲೇ ಇದ್ದರು.
ಇಂದು ದೆಹಲಿಗೆ ತೆರಳುವ ಮುನ್ನ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್, ಅಧಿಕಾರ ಹಂಚಿಕೆಯ ಬಗ್ಗೆ ನಮಲ್ಲಿ ಯಾವುದೇ ಗೊಂದಲಗಳಿಲ್ಲ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿಕೊಂಡಿದ್ದೇವೆ. ಅದೇನು ಮಾತುಕತೆಯಾಗಿದೆ ಎಂಬುದು ನನಗೆ ಗೊತ್ತಿದೆ. ಕದ್ದುಮುಚ್ಚಿ ಮಾತನಾಡಿಲ್ಲ, ನಮಿಬ್ಬರ ಚರ್ಚೆಯ ವೇಳೆ ಪಕ್ಷದ ವರಿಷ್ಠರು ಇದ್ದರು. ಅದರಂತೆ ಇಬ್ಬರೂ ನಡೆದುಕೊಳ್ಳುತ್ತೇವೆ.
ಬೇರೆಯವರು ಈ ವಿಚಾರವಾಗಿ ಟೆನ್ಶನ್ ತೆಗೆದುಕೊಳ್ಳುವುದು, ಹೇಳಿಕೆ ನೀಡುವುದರಿಂದ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಒಪ್ಪಂದವಾಗಿದೆ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಸಂದೇಶ ನೀಡಿದ್ದಾರೆ.
ನನ್ನ ಪರವಾಗಲಿ ಅಥವಾ ನನ್ನ ವಿರುದ್ಧವಾಗಲಿ, ಸಚಿವರಾಗಲಿ, ಶಾಸಕರಾಗಲಿ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಎಐಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮೊದಲೇ ಹೇಳಿದ್ದಾರೆ, ಎಲ್ಲರೂ ಅದನ್ನು ಪಾಲಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಅವರಿಗೆ ನೋಟೀಸ್ ನೀಡುವ ಬಗ್ಗೆ ಹೈಕಮಾಂಡ್ ನಾಯಕರನ್ನು ಕೇಳಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯ ಪ್ರವಾಸದ ವೇಳೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ. ಸಂಸತ್ ಅಧಿವೇಶನ ನಡೆಯುತ್ತಿದೆ. ಯಾರೆಲ್ಲಾ ಲಭ್ಯವಿರುತ್ತಾರೋ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಇಂದು ಸಂಜೆ ನಾಲ್ಕು ಗಂಟೆಗೆ ವಿವಿಧ ರಾಜ್ಯಗಳ ಚುನಾವಣೆಗೆ ಸಂಬಂಧಪಟ್ಟಂತೆ ಎಐಸಿಸಿ ವರಿಷ್ಠರು ಸಭೆ ಕರೆದಿದ್ದಾರೆ. ನನಗೆ ಅದರಲ್ಲಿ ಭಾಗವಹಿಸಲು ಆಹ್ವಾನ ಇದೆ. ವಿವಿಧ ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿಯೇ ನಾನು ಇತ್ತೀಚೆಗೆ ಕೇರಳಕ್ಕೆ ತೆರಳಿದ್ದೆ. ದೆಹಲಿ ಭೇಟಿಯ ಬಳಿಕ ಅಸಾಂಗ ಭೇಟಿ ಬಳಿಕ ಅಸ್ಸಾಂಗೂ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ದೆಹಲಿ ಭೇಟಿ ವೇಳೆ ಶುಭ ಸುದ್ದಿ ದೊರೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿದಿನವೂ ನನಗೆ ಒಳ್ಳೆಯದೇ ಆಗಿದೆ. ಪ್ರತಿದಿನವೂ ಶುಭ ಸುದ್ದಿ, ಪ್ರತಿದಿನವೂ ಉತ್ತಮ ಜೀವನ, ಉತ್ತಮ ಆರಂಭ ಹಾಗೂ ಯಶಸ್ವಿ ದಿನವಾಗಿರುತ್ತದೆ. ಪ್ರತಿದಿನ ಸಂತೋಷವಿದ್ದಂತೆ ಕಷ್ಟದ ಸಂದರ್ಭಗಳು ಇರುತ್ತವೆ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಅನೇಕ ಕಷ್ಟ ಕಾರ್ಪಣ್ಯಗಳು ಅಡೆ-ತಡೆಗಳು, ಟೀಕೆ, ಸವಾಲುಗಳು ಇದ್ದೇ ಇರುತ್ತವೆ ಎಂದು ಹೇಳಿದರು.
ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಇಂದು ತಮಗೆ ಸೇರಿದ ಇಲಾಖೆಗಳ ಸಭೆ ನಡೆಯಲಿದೆ. ತಾವು ದೆಹಲಿಗೆ ತೆರಳುವುದರಿಂದಾಗಿ ಸಭೆಯಲ್ಲಿ ಭಾಗವಹಿಸಲಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮತಿ ಪಡೆದುಕೊಂಡಿದ್ದೇನೆ. ನಿನ್ನೆಯೇ ನಾನು ನಮ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ದೆಹಲಿಯಿಂದ ವಾಪಸ್ ಬಂದ ಬಳಿಕ ಅಧಿಕಾರಿಗಳ ಜೊತೆ ಮತ್ತೊಮೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತೊಮೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿ ಭೇಟಿಯ ವೇಳೆಯಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗುತ್ತದೆಯೇ ಎಂದು ಪ್ರಶ್ನೆಗೆ, ತಾವು ಯಾರ ವಿರುದ್ಧವೂ ದೂರು ಹೇಳುವುದಿಲ್ಲ ಎಂದಿದ್ದಾರೆ.ನಾಯಕತ್ವದ ವಿಚಾರವಾಗಿ ಯಾರು ಮಾತನಾಡದಿರುವುದು ನನಗೆ ಮಾಡುವ ಸಹಾಯ ಎಂದು ಬೆಂಬಲಿಗರಿಗೆ ಹೇಳಿದ್ದಾರೆ.
