ಬೆಂಗಳೂರು, ಫೆ.11- ಬೇಸಿಗೆ ಕಾಲದಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲ ಮಂಡಳಿ ಈಗಿನಿಂದಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳತೊಡಗಿದೆ. ಮಾರ್ಚ್ ತಿಂಗಳಿಂದ ಬೇಸಿಗೆ ಕಾಲ ಶುರುವಾಗುವ ಹಿನ್ನೆಲೆಯಲ್ಲಿ ಜಲಮಂಡಳಿ ನಗರದಲ್ಲಿ ನೀರಿನ ಅಭಾವ ಎದುರಿಸಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಸಿಲಿಕಾನ್ ಸಿಟಿಯ ಹೊರ ವಲಯಗಳದ ಮಹದೇವಪುರ, ಅರ್ ಅರ್ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಕೆ.ಅರ್ ಪುರಂ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉದ್ಬವಿಸಿತ್ತು. ಹೀಗಾಗಿ ಜಲಮಂಡಳಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವಂತಾಗಿತ್ತು.
ಆದರೆ, ಈ ಬಾರಿ ಅಂತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ತಯಾರಿ ನಡೆಸಲಾಗಿದೆ. ಇದರ ಜೊತೆಗೆ ಕಾವೇರಿ 5 ನೇ ಹಂತದ ನೀರಿನ ಸೌಲಭ್ಯ ಒದಗಿಸಿರುವುದರಿಂದಿ ಈ ಬಾರಿಯ ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವ ಆಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಲ್ಲಿ ಮಿನಿ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜಿಗೆ ಮಂಡಳಿ ಟ್ಯಾಂಕರ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ನೀರಿನ ಅಭಾವ ಎದುರಾಗುವ ಪ್ರದೇಶಗಳಲ್ಲಿನ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸಲು ಮಿನಿ ವಾಟರ್ ಟ್ಯಾಂಕ್‌ಗಳನ್ನು (ಸಿಂಟೆಕ್‌್ಸ ಟ್ಯಾಂಕ್) ಅಳವಡಿಸಲು ನಿರ್ಧರಿಸಲಾಗಿದೆ.
ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರಿನ ಸರಬರಾಜು ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
