ಬೆಂಗಳೂರು,ಫೆ.11- ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿವರೆಗೂ ಯಾವುದೇ ಮಾಹಿತಿ ಇಲ್ಲದೆ ಚಿನ್ನ ಹಾಗೂ ಹಣ ಇದ್ದ ಬ್ಯಾಗ್ ರವಾನೆಯಾಗಿದೆ ಎಂದರೆ ಅದು ಗಂಭೀರ ಪ್ರಕರಣ, ಈ ಲೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಗ್ರಾಂ ಚಿನ್ನ ಹಾಗೂ ಒಂದು ಲಕ್ಷಕ್ಕೂ ಹೆಚ್ಚಿನ ಹಣ ಇದ್ದ ಬ್ಯಾಗ್ ಕಳ್ಳತನವಾಗಿರುವುದು ಬೇರೆಯ ವಿಚಾರ. ಆದರೆ ಮುಖ್ಯದ್ವಾರದಿಂದ ಸಚಿವರ ಕಚೇರಿವರೆಗೂ ಆ ಬ್ಯಾಗ್ ಹೋಗಿದ್ದು ಹೇಗೆ ಎಂಬ ಆತಂಕ ನಮನ್ನು ಕಾಡುತ್ತಿದೆ ಎಂದರು.
ಯಾವ ಗೇಟ್‌ನಿಂದ ಬ್ಯಾಗ್ ಹೋಗಿದೆ, ಆ ಹಣ ಮತ್ತು ಚಿನ್ನವನ್ನು ಎಲ್ಲಿಂದ ತರಲಾಗಿತ್ತು, ಯಾರಿಗೆ ಕೊಡುವ ಆಲೋಚನೆ ಇತ್ತು ಎಂಬೆಲ್ಲಾ ಮಾಹಿತಿಗಳನ್ನು ಪತ್ತೆ ಹಚ್ಚಲು ನಗರ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದ್ದೇನೆ. ನಾಳೆ ಅಥವಾ ನಾಡಿದ್ದು ನನಗೆ ಆಯುಕ್ತರು ತಮಗೆ ವರದಿ ನೀಡಬಹುದು ಎಂದರು.
ವಿಧಾನಸೌಧದಲ್ಲಿ ಸಿಸಿಟಿವಿಗಳಿವೆ. ಅವುಗಳನ್ನು ಪರಿಶೀಲಿಸಿದಾಗ ಬ್ಯಾಗು ತೆಗೆದುಕೊಂಡು ಹೋಗಿರುವ ನವೀನ್ ಸಿಕ್ಕಿದ್ದಾನೆ. ಬ್ಯಾಗು ಕಳ್ಳತನವಾಗಿರುವುದು, ಅದನ್ನು ಪತ್ತೆ ಹಚ್ಚುವುದು ಒಂದು ಭಾಗವಾದರೆ, ಸಚಿವರ ಕಚೇರಿಯವರೆಗೂ ಸುಳಿವಿಲ್ಲದೆ ಬ್ಯಾಗು ಹೋಗಿದೆ ಎಂದಾದರೆ ಅದನ್ನು ತನಿಖೆ ನಡೆಸಲೇಬೇಕಿದೆ ಎಂದು ಹೇಳಿದರು.
