ಬೆಂಗಳೂರು,ಫೆ.13- ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿರುವುದು ಸಿಎಂ ಸಿದ್ದರಾಮಯ್ಯನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ತಮ ಸಾಮಾಜಿಕ ಜಾಲ ತಾಣ ಎಕ್‌್ಸ ನಲ್ಲಿ ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದನ್ನು ಹಂಚಿಕೊಂಡಿರುವ ಅವರು, ಇದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿದ್ದರಾಮಯ್ಯನವರೂ ಇಂದ್ರಿಯ ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ಕುಹಕವಾಡಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನಡೆದಿರುವ 6000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ.
ಮುಖ್ಯಮಂತ್ರಿಗಳೇ , ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ? ಅಥವಾ ನಿಮಿಂದ ಮಾಡಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಸಾರ್ವಜನಿಕರು ನರಳುತ್ತಿರುವಾಗ ಜಿಲ್ಲಾ ವೈದ್ಯಾಧಿಕಾರಿಯೊಬ್ಬನನ್ನು ಅಬಕಾರಿ ಇಲಾಖೆಗೆ ನಿಯೋಜನೆ ಮಾಡುವಂತೆ ನೀವೇ ಖುದ್ದಾಗಿ ನಿರ್ದೇಶನ ನೀಡುತ್ತೀರೆಂದರೆ ಅದೆಂಥ ಒತ್ತಡ ಹಾಗೂ ವ್ಯಾಮೋಹ ನಿಮನ್ನು ಕಾಡುತ್ತಿರಬಹುದು? ಅಥವಾ ಅಧಿಕಾರ ಹಸ್ತಾಂತರದ ಚಿಂತೆ ನಿಮನ್ನು ಆವರಿಸಿದೆಯೋ? ಎಂದು ಸುನೀಲ್ ಕುಮಾರ್ ಸಿ.ಎಂ ಸಿದ್ದರಾಮಯ್ಯ ಅವರನ್ನು ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.
