ಹಾಸನ,ಫೆ.15- ಮದುವೆಗೆ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಅಚ್ಚರಿಯ ತಿರುವು ಸಿಕ್ಕಿದ್ದು, ಸಾವಿನ ನಾಟಕವಾಡಿ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಬೇಲೂರು ನಿವಾಸಿಯಾದ ಪ್ರಿಯಾಂಕಾಳನ್ನು ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿದೆ.
ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಿದ್ದ ಪತಿಯ ಸ್ನೇಹಿತ ಬಿಹಾರ ಮೂಲದ ಡೇವಿಡ್ನ ಪರಿಚಯವಾಗಿದೆ. ಆತ ಪಟ್ಟಣದ ಕಾರ್ಖಾನೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ತದನಂತರದಲ್ಲಿ ಡೇವಿಡ್ನೊಂದಿಗೆ ಆಕೆ ಸ್ನೇಹ ಬೆಳೆಸಿದ್ದಾಳೆ. ಇದು ಕುಟುಂಬದವರ ಗಮನಕ್ಕೆ ಬಂದಿಲ್ಲ.
ಫೆ.12ರಂದು ಪ್ರಿಯಾಂಕಾ (29) ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಬಂಧಿಕರ ಮದುವೆಗೆಂದು ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಹೋಗಿದ್ದಳು.ಅಂದು ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆ ಬೇಲೂರು ಬಸ್ ನಿಲ್ದಾಣದ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಘಟನೆಗೂ ಮುನ್ನ 7.30ರ ಸುಮಾರಿಗೆ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಯಾರೋ ಒಬ್ಬರ ಜೊತೆಯಲ್ಲಿ ನಾನು ಸಿಕ್ಕಿದ್ದೇನೆ ಎಂದು ಹೇಳಿದ ನಂತರ ಆಕೆಯ ಮೊಬೈಲ್ ಸ್ಥಗಿತಗೊಂಡಿದೆ. ಇದರಿಂದ ಗಾಬರಿಯಾದ ಕುಟುಂಬಸ್ಥರು ಬೇಲೂರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ನಡೆದ ಈ ಪ್ರಕರಣವು ಭಾರೀ ಸಂಚಲನ ಮೂಡಿಸಿತ್ತು.ಈ ನಡುವೆ ಕೆರೆ ಬಳಿ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದರಿಂದ ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರಾದರೂ ಮಹಿಳೆಯ ಶವ ಪತ್ತೆಯಾಗಿರಲಿಲ್ಲ. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ತನಿಖೆ ವೇಳೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಹಾಸನ ಜಿಲ್ಲಾ ಪೊಲೀಸರ ತಾಂತ್ರಿಕ ಮಾಹಿತಿ ಮತ್ತು ಆಕೆಯ ಮೊಬೈಲ್ ಕರೆಗಳ ವಿವರಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಪ್ರಿಯಾಂಕಾ ಜೀವಂತವಾಗಿದ್ದು, ತಾನು ಕೊಲೆಯಾಗಿರುವಂತೆ ಬಿಂಬಿಸಲು ಪೂರ್ವಯೋಜಿತವಾಗಿ ನಾಟಕ ರೂಪಿಸಿದ್ದಳು ಎಂಬುದು ಬಹಿರಂಗವಾಗಿದೆ.
ಡೇವಿಡ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಆಕೆ, ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದಲೇ ಕುಟುಂಬದಿಂದ ದೂರವಾಗಲು ಈ ಯೋಜನೆ ರೂಪಿಸಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರಿಗೂ ತಿಳಿಯದಂತೆ ಬಿಹಾರಕ್ಕೆ ತೆರಳಲು ಇಬ್ಬರೂ ಸಿದ್ಧತೆ ಮಾಡಿಕೊಂಡಿದ್ದರು.
ಸದ್ಯ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದು, ಪೊಲೀಸರ ವಶದಲ್ಲಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಕಾನೂನು ಕ್ರಮಗಳ ಬಗ್ಗೆ ತನಿಖೆ ಮುಂದುವರಿದಿದೆ. ಈ ಘಟನೆ ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ಎಚ್ಚರಿಕೆ ಮತ್ತು ಕಾರ್ಯಕ್ಷಮತೆಗೆ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.
