ಬೆಂಗಳೂರು,ಫೆ.15- ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಶಾಸಕ ಭೈರತಿ ಬಸವರಾಜ್ ಅವರನ್ನು 42ನೇ ಎಸಿಜೆಎಂ ನ್ಯಾಯಾಲಯ ಒಂದು ವಾರ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ವೈದ್ಯಕೀಯ ತಪಾಸಣೆ ನಂತರ ಸಿಐಡಿ ಪೊಲೀಸರು ವರದಿ ನೀಡಿದ ಬಳಿಕ ನ್ಯಾಯಾಧೀಶರು ವಿಚಾರಣೆ ನಡೆಸಿ ಫೆ.21ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಇಂದು ಬೆಳಗ್ಗೆ ಸಿಐಡಿ ಪೊಲೀಸರು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಭೈರತಿ ಬಸವರಾಜ್ ಅವರನ್ನು ಹಾಜರುಪಡಿಸಿದ್ದರು.
ಇದಕ್ಕೂ ಮುನ್ನ ಜಯದೇವ ಆಸ್ಪತ್ರೆಯಲ್ಲಿ ಅವರಿಗೆ ಹೃದ್ರೋಗ ಸಂಬಂಧ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಗಿತ್ತು. ಪ್ರಸ್ತುತ ಸಿಐಡಿ ಅಧಿಕಾರಿಗಳ ಪರ ವಕೀಲರು ಪ್ರಕರಣದ ಕುರಿತಂತೆ ವಿಚಾರಣೆ ನಡೆಸುವ ಅಗತ್ಯವಿದ್ದು, 15 ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು 7 ದಿನ ಮಾತ್ರ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
