ನೆಲಮಂಗಲ,ಫೆ.15- ಅತಿವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸಂಭವಿಸಿದೆ.
ದೊಡ್ಡಬಳ್ಳಾಪುರದ ದುರ್ಗಾಪ್ರಸಾದ್ (20), ಕೇಶವ್ (19), ಲಲಿತ್‌ಕುಮಾರ್(23), ಹರ್ಷಿತ್ (20), ಧನುಷ್(17) ಮೃತಪಟ್ಟ ಯುವಕರು. ರಾತ್ರಿ 11.30ರ ಸುಮಾರಿನಲ್ಲಿ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಇಂಡಿಕಾ ಕಾರು ಚಿಕ್ಕಬಿದರಕಲ್ಲಿನ ಜಿಂದಾಲ್ ಕೆನರಾ ಬ್ಯಾಂಕ್ ಎದುರುಗಡೆ ಫ್ಲೈಓವರ್ ಮೇಲಭಾಗದಲ್ಲಿ ನಿಯಂತ್ರಣತಪ್ಪಿ ಡಿವೈಡರ್ ದಾಟಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಕಾರಿನೊಳಗೆ ನಾಲ್ವರು ಯುವಕರು ಸಿಕ್ಕಿಕೊಂಡು ಮೃತಪಟ್ಟರೆ, ಮತ್ತೊಬ್ಬ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮೃತರ ಪೈಕಿ ಹರ್ಷಿತ್ ದೊಡ್ಡಬಳ್ಳಾಪುರ ನಿವಾಸಿಯಾಗಿದ್ದು, ರಾಜನಕುಂಟೆಯ ಸಾಯಿವಿದ್ಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಲಲಿತ್ ಗಂಗಾಧರಪುರ ಲೇಔಟ್‌ನ ನಿವಾಸಿಯಾಗಿದ್ದು ಸಿಸಿಟಿವಿ ಅಳವಡಿಕೆ ಕೆಲಸ ಮಾಡುತ್ತಿದ್ದರು.
ಉಳಿದ ಮೂವರು ಯುವಕರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಈ ಐದು ಮಂದಿ ಸ್ನೇಹಿತರೆಲ್ಲರೂ ಸೇರಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬಸ್‌ನ ಗಾಜು ಪುಡಿಪುಡಿಯಾಗಿ ಮುಂಭಾಗ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿದ್ದ 42 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಯುವಕರ ಬಗ್ಗೆ ಅವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯ ಎಂ.ಸತ್ಯವರ ಗ್ರಾಮದ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ 48 ಗಂಟೆಗಳಲ್ಲಿ ಇದೇ ರೀತಿಯ ಮತ್ತೊಂದು ಅವಘಡ ಸಂಭವಿಸಿ ಐವರು ಯುವಕರು ಮೃತಪಟ್ಟಿರುವುದು ವಿಷಾದಕರ.
ಭೀಕರತೆ ವಿವರಿಸಿದ ಬಸ್ ಚಾಲಕ: ಈ ಅಪಘಾತದ ಭೀಕರತೆಯ ಬಗ್ಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೆಂಪರಾಜು ಅವರು ವಿವರಿಸಿದ್ದು, ಕಾರು ಅತಿವೇಗದಲ್ಲಿ ಪಕ್ಕದ ರಸ್ತೆಯಿಂದ ಹಾರಿ ನನ್ನ ಬಸ್‌ಗೆ ಡಿಕ್ಕಿ ಹೊಡೆದಾಗ ಜೋರಾಗಿ ಸದ್ದು ಕೇಳಿಸಿತು. ಅಪಘಾತದ ತೀವ್ರತೆಗೆ ಬಸ್‌ನ ಗಾಜುಗಳು ಒಡೆದು ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ಐವರು ಯುವಕರೂ ಮೃತಪಟ್ಟಿದ್ದಾರೆ. ಬಸ್ ಅಪಘಾತಕ್ಕೀಡಾದ ನಂತರ ಪ್ರಯಾಣಿಕರನ್ನು ಹುಬ್ಬಳ್ಳಿಗೆ ತೆರಳುತ್ತಿದ್ದ ಸಂಸ್ಥೆಯ ಬೇರೆ ಬಸ್‌ಗಳಲ್ಲಿ ಕಳುಹಿಸಿದೆ ಎಂದು ಮಾಹಿತಿ ನೀಡಿದರು.
