ಬೆಂಗಳೂರು, ಫೆ.16- ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ, ದಾವಣಗೆರೆ, ಕೊಡಗು ನ್ಯಾಯಾಲಯಗಳಿಗೆ ಅನಾಮಧೇಯ ಬಾಂಬ್ ಬೆದರಿಕೆ ಬಂದಿದ್ದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಧೀಶರ ಅಧಿಕೃತ ಇ-ಮೇಲ್ ಗೆ ಅನಾಮಧೇಯ ಐಡಿಯಿಂದ ಬಾಂಬ್ ಬೆದರಿಕೆ ಬಂದಿದೆ. ದಾವಣಗೆರೆಯ ನ್ಯಾಯಾಲಯಕ್ಕೆ ನ್ಯಾಯಾಧೀಶರ ಇ-ಮೇಲ್‌ಗೆ ಬಾಂಬ್ ಬೆದರಿಕೆ ಬಂದಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ ಆರ್ಥಿಕ ದುರ್ಬಲರಿಗಾಗಿ ರೂಪಿಸಿ, ಜಾರಿಗೊಳಿಸಿರುವ ಇಡಬ್ಲ್ಯೂಎಸ್ ಹಿಂಪಡೆಯಬೇಕು. ಇಲ್ಲವಾದರೆ ಬಾಂಬ್ ಸ್ಫೋಟಿಸುತ್ತೇವೆ ಎಂದು ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ದಾವಣಗೆರೆಯ ನ್ಯಾಯಾಲಯವನ್ನು ಫೆ.8ರಿಂದ 21ರವರೆಗೆ ಅಥವಾ ಮಾರ್ಚ್ 12ರಿಂದ 15ರ ನಡುವೆ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಡಿಕೇರಿಯ ಹೊರ ವಲಯದಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೂ ಬಾಂಬೆ ಬೆದರಿಕೆ ಬಂದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಧಾರವಾಡ ಹೈಕೋರ್ಟ್ ನ ವಿಭಾಗೀಯ ಪೀಠ ನ್ಯಾಯಮೂರ್ತಿಗಳ ಇ-ಮೇಲ್ ಬೆದರಿಕೆಯ ಸಂದೇಶ ಬಂದಿದೆ. ಮಧ್ಯಾಹ್ನ 12.15ಕ್ಕೆ ಆರ್ ಡಿ ಎಕ್‌್ಸ ಬಳಸಿ ನ್ಯಾಯಾಲಯವನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಆತಂಕ ಸೃಷ್ಟಿಯಾಗಿತ್ತು.
ಮೂರು ನ್ಯಾಯಾಲಯಗಳಲ್ಲೂ ನ್ಯಾಯಮೂರ್ತಿಗಳು, ವಕೀಲರು, ಅಧಿಕಾರಿ, ಸಿಬ್ಬಂದಿಗಳು ಮತ್ತು ಕಕ್ಷಿದಾರರನ್ನು ಹೊರಗೆ ಕಳುಹಿಸಿ ಶ್ವಾನದಳ, ಬಾಂಬ್‌ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿವೆ. ಆದರೆ ಸ್ಫೋಟಕದಂತಹ ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಮೈಸೂರು, ತುಮಕೂರು, ಹನೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು.ಧಾರವಾಡ ನ್ಯಾಯಪೀಠಕ್ಕೆ ಕಳೆದ ಜನವರಿ 24ರಂದು ಬಾಂಬ್‌ಬೆದರಿಕೆ ಹಾಕಲಾಗಿತ್ತು. ಪದೇ ಪದೇ ಇಂಥ ಬೆದರಿಕೆಗಳಿಂದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಕಾರ್ಯ ಕಲಾಪಗಳಿಗೂ ಅಡ್ಡಿಯಾಗುತ್ತಿರುವ ಆಕ್ಷೇಪಗಳು ಕೇಳಿ ಬಂದಿವೆ.
ಗಂಭೀರವಾಗಿ ಪರಿಗಣನೆ :
ರಾಜ್ಯದ ಮೂರು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಎಲ್ಲಾ ನ್ಯಾಯಾಲಯಗಳಿಗೆ ಬಂದಿರುವ ಸಂದೇಶದ ಮಾಹಿತಿ ತಿಳಿದು ನಮ ಪೊಲೀಸರು ತಕ್ಷಣ ಆ ನ್ಯಾಯಾಲಯಗಳ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ ಎಂದು ಹೇಳಿದರು.ಈ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಇ-ಮೇಲ್ ಯಾವ ಸ್ಥಳಗಳಿಂದ ಬಂದಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
