ಬೆಂಗಳೂರು, ಫೆ.17- ಆಡಳಿತಾತಕ ಉದ್ದೇಶದಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರನ್ನಾಗಿ ಪರಿವರ್ತನೆ ಮಾಡುವುದಾಗಿ ಘೋಷಿಸಿದ್ದ ಸರ್ಕಾರ ಇದೀಗ ಜಿಬಿಎಗೆ ಆದಾಯವೇ ಇಲ್ಲದಂತೆ ಮಾಡಿದೆ.ಜಿಬಿಎಯಿಂದ ಏಕ ನಿವೇಶನ ನಕ್ಷೆ ಮಂಜೂರಾತಿ ಅದೇಶ ಹಿಂಪಡೆದಿರುವ ಸರ್ಕಾರ ಇದೀಗ ಜಿಬಿಎಗೆ ಯಾವುದೇ ಅದಾಯ ಮೂಲ ಇಲ್ಲದಂತಾಗಿಸಿದೆ.
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಆ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಆದಾಯವನ್ನು ಅವರೇ ಖರ್ಚು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಜಿಬಿಎ ಖರ್ಚು ವೆಚ್ಚಕ್ಕಾಗಿ ಐದು ನಗರಪಾಲಿಕೆಗಳಲ್ಲಿ ಕಟ್ಟಡ ನಿರ್ಮಾಣದ ವೇಳೆ ಶುಲ್ಕ ಪಾವತಿಸಿಕೊಂಡು ಏಕ ನಿವೇಶನ ನಕ್ಷೆ ಮುಂಜೂರಾತಿ ನೀಡಿ ಅದಾಯ ಗಳಿಸುವ ಅಧಿಕಾರ ನೀಡಲಾಗಿತ್ತು. ಇದರಿಂದ ಜಿಬಿಎಗೆ ವಾರ್ಷಿಕ ನೂರು ಕೋಟಿ ಅದಾಯ ನಿರೀಕ್ಷೆ ಮಾಡಲಾಗಿತ್ತು.
ಅದರೆ ಇದೀಗ ಸರ್ಕಾರ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961 ರ ಕಲಂ 17 ರ ಪ್ರಕಾರ ಏಕ ನಿವೇಶನ ನಕ್ಷೆ ಮಂಜೂರಾತಿ ಒಂದು ಸಾವಿರ ಚ.ಮೀ ನಿಂದ ಹತ್ತು ಸಾವಿರ ಚ.ಮೀ ವರೆಗಿನ ಏಕ ನಿವೇಶನ ನಕ್ಷೆ ಮಂಜೂರಾತಿ ನೀಡುವ ಆದೇಶವನ್ನು ಅಯಾ ನಗರಪಾಲಿಕೆಯ ಅಯುಕ್ತರಿಗೆ ನೀಡಿ ಅದೇಶ ಹೊರಡಿಸಿದೆ.
ಇನ್ನೂ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅನ್ನೂ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಅನುಕೂಲತೆ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಆದೇಶದಲ್ಲಿ ಮಾಹಿತಿ ನೀಡಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಸದ್ಯ ಜಿಬಿಎಗೆ ಯಾವುದೇ ಅದಾಯ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ. ಕಛೇರಿಯ ಖರ್ಚು ವೆಚ್ಚಗಳಿಗೂ ಹಣವಿಲ್ಲದೆ ಪರದಾಡುವಂತಹ
ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆಯಿದೆ.
ಈ ಬಾರಿಯ ಬಜೆಟ್ ನಲ್ಲಿ ಜಿಬಿಎಗೆ ಎಂದು ಸುಮಾರು 80 ಕೋಟಿ ಹಣ ಬೇಡಿಕೆ ಇಟ್ಟಿದೆ ಸರ್ಕಾರ ಮನಸು ಮಾಡಿ ಅನುದಾನ ಬಿಡುಗಡೆ ಮಾಡಿದರೆ ಜಿಬಿಎ ಉಳಿಯುತ್ತದೆ, ಇಲ್ಲದಿದ್ದರೆ ಅದೇನಾಗುತ್ತೋ ಕಾದು ನೋಡಬೇಕಿದೆ.
