ಬೆಂಗಳೂರು,ಫೆ.23- ದಿನದಿಂದ ದಿನಕ್ಕೆ ಉದ್ಯಾನನಗರಿಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ತಂಪು ಪಾನೀಯಗಳು, ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನಂತೆ ಎಳನೀರು ಬೆಲೆಯೂ ಸಹ ಗಗನಕ್ಕೇರಿದೆ.ಕಳೆದ ವರ್ಷದಿಂದಲೂ ಸಹ ಎಳನೀರಿನ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಕಳೆದ ಕೆಲವು ತಿಂಗಳ ಹಿಂದೆ ತುಸು ಇಳಿದಿದ್ದ ಬೆಲೆ ಮತ್ತೆ ಏರಿಕೆಯಾಗಿದ್ದು, 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ.
ಹವಾಮಾನ ವೈಪರೀತ್ಯ, ರೋಗಭಾದೆ, ಮಳೆಯ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಂದ ಇಳುವರಿ ಕುಂಠಿತವಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿಗೆ ಮಂಡ್ಯ, ಮದ್ದೂರು, ಮೈಸೂರು, ತುಮಕೂರು, ರಾಮನಗರ, ಮಳವಳ್ಳಿ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಎಳನೀರು ಬರುತ್ತದೆ.
ಗಾತ್ರ ಹಾಗೂ ಗುಣಮಟ್ಟಕ್ಕನುಗುಣವಾಗಿ ನಗರದಲ್ಲಿ ಮಾರಾಟವಾಗುತ್ತಿದ್ದು, ಉತ್ತಮ ಎಳನೀರು ಈಗಾಗಲೇ 50 ರೂ.ಗಳಿಂದ 60 ರೂ.ಗಳಿಗೆ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಸಾರ್ವಜನಿಕರು ಬೇಸಿಗೆಯಲ್ಲಿ ಆಹಾರಕ್ಕಿಂತ ಹೆಚ್ಚಾಗಿ ಪಾನೀಯಗಳ ಸೇವನೆ ಹೆಚ್ಚಾಗಿ ಮಾಡುತ್ತಾರೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ಎಳನೀರಿಗೆ ಹೆಚ್ಚು ಒತ್ತು ನೀಡುತ್ತಾರೆ. ಇಳುವರಿ ಕುಂಠತವಾದ್ದರಿಂದ ಹಣ ಕೊಟ್ಟರೂ ಸಹ ಮಾರುಕಟ್ಟೆಯಲ್ಲಿ ಎಳನೀರು ಸಿಗುತ್ತಿಲ್ಲ. ಇನ್ನು ಅಲ್ಲಿಂದ ತಂದು ಇಲ್ಲಿ ಮಾರಾಟ ಮಾಡಬೇಕಾದರೆ ಸಾಗಾಟದ ವೆಚ್ಚ, ಕೂಲಿ ಎಲ್ಲವನ್ನೂ ಲೆಕ್ಕ ಹಾಕಿ ಮಾರಾಟ ಮಾಡಬೇಕಾಗುತ್ತದೆ. ಬೆಲೆ ಏರಿಕೆ ಅನಿವಾರ್ಯ ಎಂದು ಉಲ್ಲಾಳದ ಎಳನೀರು ವ್ಯಾಪಾರಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.
