ಬೆಂಗಳೂರು, ಫೆ.23- ನಗರದಲ್ಲಿನ ಕೆರೆಗಳ ನೀರನ್ನು ಅಂತರ್ ಜಲ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸ್ನಾನಕ್ಕೆ ಮತ್ತು ಕುಡಿಯುವ ಉದ್ದೇಶಕ್ಕೆ ಕೆರೆ ನೀರು ಬಳಸುವಂತೆ ಸರ್ಕಾರ ಸಲಹೆ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕೆರೆಗಳಲ್ಲಿನ ನೀರನ್ನು ಸ್ನಾನಕ್ಕಾಗಲಿ ಅಥವಾ ಕುಡಿಯುವ ಉದ್ದೇಶಕ್ಕಾಗಿ ಬಳಸಲು ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ನೀರಿನ ಗುಣಮಟ್ಟ ಅಧ್ಯಯನ ಸಂಸ್ಥೆ ವರದಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದರು.
ಕೆರೆಯ ನೀರನ್ನು ಕುಡಿಯಲು ಅಥವಾ ಸ್ನಾನಕ್ಕೆ ಬಳಸುವಂತೆ ನಾವು ಎಲ್ಲಿಯೂ ಹೇಳಿಲ್ಲ. ಕೆರೆಗಳಲ್ಲಿರುವ ನೀರು ಅಂತರ್ಜಲ ಅಭಿವೃದ್ಧಿಗೆ ಮಾತ್ರ ಬಳಕೆ ಯಾಗುತ್ತಿದೆ.
ತಿಪ್ಪಗೊಂಡನಹಳ್ಳಿ ಕೆರೆಯ ನೀರನ್ನೂ ಕೂಡ ಶುದ್ಧೀಕರಿಸಿ ಸರಬರಾಜು ಮಾಡಲಾಗು ತ್ತಿದೆ. ಇದಕ್ಕಾಗಿ ಬಿಡಬ್ಲ್ಯೂಎಸ್‌ಎಸ್‌ಬಿ ಪ್ರತ್ಯೇಕವಾಗಿ ಘಟಕ ಹೊಂದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮನ್ರೇಗಾ ಯೋಜನೆಯನ್ನು ವಾಪಸ್ ತರಬೇಕು. ಅಲ್ಲಿಯವರೆಗೂ ನಮ ಹೋರಾಟ ಮುಂದುವರೆಯಲಿದೆ. ಕೇಂದ್ರ ಸರ್ಕಾರ ಬಡವರು ಮತ್ತು ಕೂಲಿ ಕಾರ್ಮಿಕರ ವಿರುದ್ಧ ದೊಡ್ಡ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು.
ಹೊಸದಾಗಿ ರೂಪಿಸಿರುವ ವಿಬಿ ಜಿ ರಾಮ್ ಜಿ ಯೋಜನೆಯ ನಿಯಮಗಳ ಬಗ್ಗೆಯೂ ಈವರೆಗೂ ಅಧಿಕೃತವಾಗಿ ಯಾವುದೇ ಆದೇಶ ಹೊರಬಿದ್ದಿಲ್ಲ. ಹಿಂದೆ ಕೆಲಸ ಮಾಡಿದ್ದ ಕೂಲಿಯನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಇಂದು ಕಾಂಗ್ರೆಸ್ ವತಿಯಿಂದ ಚಿಕ್ಕಬಳ್ಳಾಪುರದಲ್ಲಿಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ನಮಗೆ ಕೂಲಿ ಕಾರ್ಮಿಕರು ಹಾಗೂ ಪಂಚಾಯಿತಿಗಳನ್ನು ಉಳಿಸಿಕೊಳ್ಳಬೇಕಿದೆ ಅದಕ್ಕಾಗಿ ಮುಂದೆ ಏನು ಮಾಡಬೇಕು ಎಂಬುದನ್ನು ನಾವು ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ನಮ ರಾಷ್ಟ್ರೀಯ ನಾಯಕರು.
ಇಲ್ಲಿಂದಲೇ ಅವರಿಗೆ ನಮಸ್ಕಾರ ಎಂದು ಹೇಳಿದ್ದಾರೆ. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸುವ ಚಿಂತನೆ ರಾಜ್ಯ ಸರ್ಕಾರದಿಂದ ನಡೆದಿದೆ. ಈ ವಿಷಯವಾಗಿಯೂ ಪೋಷಕರ ಒತ್ತಡ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳಾಗುತ್ತಿವೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಒಕ್ಕಲಿಗರಿಗೆ ಕಾಂಗ್ರೆಸ್ ನಲ್ಲಿ ಮಾತ್ರ ಮುಖ್ಯಮಂತ್ರಿಯಾಗುವ ಅವಕಾಶಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸದೆ ಡಿ.ಕೆ.ಶಿವಕುಮಾರ್ ನಿರ್ಗಮಿಸಿದರು.
