ಬೆಂಗಳೂರು,ಫೆ.23- ಕುರ್ಚಿ ಅಲುಗಾಡುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ಜಾತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಜಾತಿ ಯವರು ಬಿಟ್ಟು ಬಿಡಿ. ಸ್ವತಃ ಸಿದ್ದರಾಮಯ್ಯನವರು ಪ್ರತಿನಿಧಿಸುವ ಸ್ವಜಾತಿಯವರೇ ಇಂದು ಬೀದಿಗೆ ಬಿದ್ದಿದ್ದಾರೆ. 90 ಸಾವಿರ ಕುರಿಗಳು ಸಾವನ್ನಪ್ಪಿವೆ. ಇವುಗಳಿಗೆ ಪರಿಹಾರವನ್ನೇ ಕೊಟ್ಟಿಲ್ಲ. ಇವರ ಕುರ್ಚಿ ಅಲುಗಾಡಿದಾಗಲೆಲ್ಲ ಅಹಿಂದ ಜಪಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರಿಗೆ ಬಿಜೆಪಿ ಮೇಲೆ ಕೋಪ ಕಡಿಮೆ ಆಗಿರಬಹುದು. ಪಾಪ ಕುರಿಗಾಹಿ ಸಿಎಂ ಆಗಿದ್ದರೂ ಸಹಿಸುತ್ತಿಲ್ಲ ಎಂದು ಅವರು ಕಾಂಗ್ರೆಸ್‌ನವರಿಗೆ ಹೇಳಿರಬಹುದು. ಇದು ನಮಗೆ ಹೇಳಿದ ಮಾತಲ್ಲ. ಕಾಂಗ್ರೆಸ್‌ನವರು ಇವರಿಗೆ ಏನು ಕಡಿಮೆ ಮಾಡಿದ್ದಾರೆಂದು ಇಂತಹ ಆರೋಪ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಮೊದಲು ಸತ್ತಿರುವ ಕುರಿಗಳಿಗೆ ಪರಿಹಾರ ಕೊಡಿ. ಅನೇಕರು ಸಂಕಷ್ಟದಲ್ಲಿದ್ದಾರೆ. ನೀವು ನಿಮ ರಕ್ಷಣೆಗಾಗಿ ಅಹಿಂದ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಜನ ಇದನ್ನು ಅರ್ಥ ಮಾಡಿಕೊಳ್ಳುವಷ್ಟು ದಡ್ಡರಲ್ಲ ಎಂದರು.
ಕಾಂಗ್ರೆಸ್ ಸರಕಾರವು ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಯಾವ ನೈತಿಕತೆ ಇಟ್ಟುಕೊಂಡು ಭ್ರಷ್ಟಾ ಚಾರದ ಕುರಿತು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಸಿಎಂ, ಡಿಸಿಎಂ, ಪ್ರಿಯಾಂಕ್ ಖರ್ಗೆಯವರು ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ಕುರಿತು ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿನವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಇದೇ ಸರಕಾರದ ಅವಧಿಯಲ್ಲಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತಹತ್ಯೆ ಮಾಡಿಕೊಂಡರಲ್ಲವೇ? ಸಿದ್ದರಾಮಯ್ಯನವರ ಸಂಪುಟದ ಸಚಿವರು ರಾಜೀನಾಮೆ ಕೊಟ್ಟರಲ್ಲವೇ? ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ನೂರಾರು ಕೋಟಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಚುನಾವಣೆಗೆ ಬಳಸಲಿಲ್ಲವೇ? ಹಾಗಿದ್ದರೆ ಪ್ರಿಯಾಂಕ್ ಖರ್ಗೆಯವರು ಇಲ್ಲವೆಂದು ಹೇಳಲಿ ಎಂದು ಸವಾಲೆದರು.
ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ. ನೀವು ನಮಗೆ ಉಪದೇಶ ನೀಡುತ್ತೀರಾ? ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಆಂಜನೇಯ ಅವರು ಸಚಿವರಾಗಿದ್ದಾಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ. ಬಂಜಾರ ಸಮಾಜದ ಬಗ್ಗೆ ತಾತ್ಸಾರ, ಅಲಕ್ಷ್ಯ ತೋರುವ ಇವರು ಅಹಿಂದ ಹೆಸರು ಹೇಳಿಕೊಂಡು ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಈ ಸಮಾಜವು ಕಳೆದ 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ.100ಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯನವರ ಸರಕಾರದಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ. ಮತ್ತೊಂದು ಕಡೆ ಈ ಸಮಾಜ ಟಾರ್ಗೆಟ್ ಆಗುತ್ತಿದೆ ಎಂದು ವಿಶ್ಲೇಷಿಸಿದರು.
ಸೂರಗುಂಡನಕೊಪ್ಪದಲ್ಲಿ ಈಚೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಉಪಮುಖ್ಯಮಂತ್ರಿ ಶಿವಕುಮಾರ್ ಬಂದಿದ್ದರು. ಅಲ್ಲಿದ್ದ ಬಂಜಾರ ಸಮಾಜದ ಯುವಕರು ಸಹಜವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ತಮ ನ್ಯಾಯಯುತ ಬೇಡಿಕೆ ಮುಂದಿಟ್ಟಿದ್ದಾರೆ. ಇದ್ಯಾವುದಕ್ಕೂ ಉತ್ತರ ಕೊಡದೇ ಶಿವಕುಮಾರ್ ಅವರು ಓಡಿಹೋಗಿದ್ದನ್ನು ನೋಡಿದ್ದೇವೆ. ಆ ಬಂಜಾರ ಸಮಾಜದ ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನೂ ನೋಡಿದ್ದೇವೆ ಎಂದರು.
ಚಂದ್ರು ಲಮಾಣಿಯವರ ವಿಚಾರ ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ ಎಂದರು. ಆಡಿಯೋ ಲೀಕ್ ಆಗಿದೆ. ಏನೇನು ಚರ್ಚೆ ಆಗಿದೆ? ಯಾವ ರೀತಿ ರಾಜಕೀಯವಾಗಿ ಟಾರ್ಗೆಟ್ ಆಗಿದ್ದಾರೆ. ಇವೆಲ್ಲವೂ ಬಹಿರಂಗಗೊಂಡಿದೆ ಎಂದು ತಿಳಿಸಿದರು.
