ಬೆಂಗಳೂರು, ಫೆ.23- ಗಡುವು ಮುಗಿದರೂ ಸುಪ್ರೀಂಕೋರ್ಟ್‌ಗೆ ಜಿಬಿಎ ವಾರ್ಡ್‌ಗಳ ಪುನರ್‌ವಿಂಗಡಣೆಯ ಅಂತಿಮ ಪಟ್ಟಿ ಸಲ್ಲಿಸಲು ಸರ್ಕಾರ ತಿಣುಕಾಡುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಅಂತಿಮ ಪುನರ್‌ವಿಂಗಡಣಾ ಪಟ್ಟಿಯನ್ನು ಫೆ.20ರೊಳಗೆ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.
ಆದರೆ, ಈಗಾಗಲೇ ಗಡುವು ಮುಗಿದು ಮೂರು ದಿನವಾದರೂ ಸರ್ಕಾರ ಇನ್ನು ಅಂತಿಮ ಡಿಲಿಮೇಟೆಷನ್ ಪಟ್ಟಿಯನ್ನು ಸಿದ್ದಪಡಿಸಿಲ್ಲ. ಕೆಲ ವಾರ್ಡ್‌ಗಳನ್ನು ಯಾವ ಯಾವ ವಾರ್ಡ್‌ಗೆ ಸೇರಿಸಬೇಕು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಗೆಲುವು ಸಾಧಿಸಲು ಯಾವ ಮಾನದಂಡ ಉಪಯೋಗಿಸಬೇಕು ಎಂಬ ಬಗ್ಗೆ ಚಿಂತನ ಮಂಥನ ನಡೆಸಿ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಲಾಗುತ್ತಿದೆ.
ಇನ್ನು ಮೂರ್ನಾಲ್ಕು ದಿನದೊಳಗೆ ಅಂತಿಮ ಪಟ್ಟಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಮೂಲಗಳು ಈ ಸಂಜೆಗೆ ತಿಳಿಸಿವೆ.ಜಿಬಿಎ ಚುನಾವಣೆ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಾ.3ಕ್ಕೆ ಬರಲಿರುವುದರಿಂದ ಆ ವೇಳೆಗೆ ಕೋರ್ಟ್‌ಗೆ ಅಂತಿಮ ಪಟ್ಟಿ ಸಲ್ಲಿಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಮತ್ತೊಂದು ಮೂಲಗಳ ಪ್ರಕಾರ ವಾರ್ಡ್ ಪುನರ್‌ವಿಂಗಡಣೆ ಸಿದ್ದಗೊಂಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಒಮೆ ಓಕೆ ಎಂದರೆ ಅದನ್ನೇ ನ್ಯಾಯಲಯಕ್ಕೆ ಸಲ್ಲಿಸಲಾಗುವುದು ಆದರೆ, ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಅವರು ದೆಹಲಿ ಓಡಾಟದಲ್ಲಿ ಬ್ಯುಸಿಯಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಏನೇ ಆದರೂ ಒಂದೇರಡು ದಿನಗಳಲ್ಲಿ ಡಿಕೆಶಿ ಅವರು ವಾರ್ಡ್‌ಗಳ ವಿಂಗಡಣೆಯ ಅಂತಿಮ ಪಟ್ಟಿಯನ್ನು ನೋಡಿ ಅಂತಿಮಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ವಾರ್ಡ್‌ಗಳ ಪುನರ್‌ವಿಂಗಡಣೆಯೇ ಅಂತಿಮ: ಸರ್ಕಾರ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಿ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರೆ ಅಲ್ಲಿಗೆ ಸರ್ಕಾರದ ಕೆಲಸ ಮುಗಿದ್ದಂತೆ. ಉಳಿದ ಕಾರ್ಯವನ್ನು ಚುನಾವಣಾ ಆಯೋಗವೇ ನಿರ್ಧರಿಸಲಿದೆ.
ಎಲ್ಲ ಅಂದುಕೊಂಡಂತೆ ನಡೆದರೆ, ಮೇ ಅಂತ್ಯದ ವೇಳೆಗೆ ಚುನಾವಣಾ ವೇಳಾಪಟ್ಟಿ ಸಿದ್ದಗೊಂಡು ಜೂನ್ ಅಥವಾ ಜುಲೈನಲ್ಲಿ ಜಿಬಿಎಗೆ ಚುನಾವಣೆ ನಡೆಯುವುದು ಖಚಿತ ಎಂಬಂತಾಗಿದೆ.
