ಬೆಂಗಳೂರು,ಫೆ.26- ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ನಿನ್ನೆ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆ ನಡೆಸಿದ್ದಾರೆ.
ಪೂರ್ವ ವಿಭಾಗದ 14 ಪೊಲೀಸ್ ತಂಡಗಳು ರಾಮಮೂರ್ತಿನಗರ, ಕಲ್ಕೆರೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಒಂದು ಸಾವಿರಕ್ಕೂ ಹೆಚ್ಚು ವಿದೇಶಿಗರು ನೆಲೆಸಿದ್ದ ಬಾಡಿಗೆ ಮನೆಗಳನ್ನು ಪತ್ತೆಹಚ್ಚಿ ಅವರ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ಪೈಕಿ 11 ವಿದೇಶಿ ಪ್ರಜೆಗಳು ಸರಿಯಾದ ದಾಖಲೆಗಳಿಲ್ಲದೇ, ವೀಸಾ ಅವಧಿ ಮುಗಿದಿದ್ದರೂ ನೆಲೆಸಿರುವುದು ಕಂಡು ಬಂದಿದೆ. ಅವರ ಬಳಿ ಇರುವ ದಾಖಲೆಗಳಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ವಿಶೇಷ ಕಾರ್ಯಾಚರಣೆ ವೇಳೆ ಬಹುತೇಕ ನೈಜೀರಿಯಾ ಹಾಗೂ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಇನ್ನೂ ಕೆಲವು ವಿದೇಶಿ ಪ್ರಜೆಗಳು ಯಾವ ದೇಶದಿಂದ ಯಾವ ಸಂದರ್ಭದಲ್ಲಿ ನಗರಕ್ಕೆ ಬಂದಿದ್ದಾರೆ, ಯಾರು ಅವರನ್ನು ಕರೆತಂದಿದ್ದಾರೆ, ಅವರ ಬಳಿ ಇರುವ ವೀಸಾ ಹಾಗೂ ಪಾಸ್‌ಪೋರ್ಟ್ ಮಾನ್ಯತೆಯ ಬಗ್ಗೆ ಸಮಗ್ರವಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಇದೇ ರೀತಿ ನಗರದ ಎಲ್ಲಾ ವಿಭಾಗಗಳಲ್ಲಿಯೂ ನೆಲೆಸಿರುವ ವಿದೇಶಿ ಪ್ರಜೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಈ ಹಿಂದೆಯೂ ಸಹ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನಗರಕ್ಕೆ ಬಂದು ನೆಲೆಸಿರುವವರ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಅಲ್ಲದೇ ಕಳೆದ ಜನವರಿಯಲ್ಲಿ ಎಲೆಕ್ಟ್ರಾನಿಕ್‌ಸಿಟಿ ಮತ್ತು ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಅವರ ಆಧಾರಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ನಕಲಿ ಆಧಾರ್‌ಕಾರ್ಡ್‌ಗಳು ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ವಿವಿಧ ವೀಸಾಗಳಲ್ಲಿ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆಯೂ ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.ವೀಸಾ ಅವಧಿ ಮುಗಿದಿದ್ದರೂ ತಮ ದೇಶಕ್ಕೆ ಹಿಂದಿರುಗದೇ ನಗರದಲ್ಲೇ ಅಕ್ರಮವಾಗಿ ವಾಸವಾಗಿರುವ ವಿದೇಶಿಗರು ಮಾಡುತ್ತಿರುವ ಉದ್ಯೋಗದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
