ಬೆಂಗಳೂರು,ಫೆ.26- ತಮ ಮನೆಗಳಲ್ಲಿ ಬಾಡಿಗೆಗೆ ವಾಸವಿರುವ ವಿದೇಶೀಯರ ಬಗ್ಗೆ ಯಾವುದೇ ಅನುಮಾನ ವಿದ್ದಲ್ಲಿ ಮಾಲೀಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.
ನಗರದ ಎಲ್ಲಾ ಪ್ರದೇಶಗಳಲ್ಲಿ ವಾಸವಿರುವ ವಿದೇಶಿ ಪ್ರಜೆಗಳ ವೀಸಾ, ಫಾರಂ-ಸಿ ಮತ್ತು ಇತರೆ ದಾಖಲಾತಿಗಳ ಪರಿಶೀಲನೆಯನ್ನು ಸಿಸಿಬಿ ಒಳಗೊಂಡಂತೆ ಎಲ್ಲಾ ವಿಭಾಗದ ಉಪ ಪೊಲೀಸ್ ಆಯುಕ್ತರು ನಡೆಸುತ್ತಿದ್ದಾರೆೆ.
ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ, ಲೈವ್ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರದೇಶವಾರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.ಮನೆಯ ಮಾಲೀಕರು ತಮ ಮನೆಗಳಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಫಾರಂ-ಸಿ ಮಾಹಿತಿ ಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಕಡ್ಡಾಯವಾಗಿದೆ.
ವೀಸಾ ಅವಧಿ ಮೀರಿರುವ ಹಾಗೂ ದಾಖಲಾತಿ ಇಲ್ಲದ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದಲ್ಲಿ ಡಿಪೋಟೇಷನ್ ಪ್ರಕ್ರಿಯೆ ಕೂಡ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
